ಮಧ್ಯಂತರ ಜಾಮೀನು ದೊರೆತ ಬೆನ್ನಲ್ಲೇ ಝುಬೈರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರಿಂದ ಹೊಸ ವಾರಂಟ್

Prasthutha|

ಲಕ್ನೋ: ಸುಪ್ರೀಂ ಕೋರ್ಟ್ ಪತ್ರಕರ್ತ ಮುಹಮ್ಮದ್ ಝುಬೈರ್ ಗೆ ಸೀತಾಪುರದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ 5 ದಿನಗಳ ಮಧ್ಯಂತರ ಜಾಮೀನು ನೀಡಿದ ಒಂದೇ ಗಂಟೆಯಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿ ಪೊಲೀಸರು ಮತ್ತೊಂದು ವಾರಂಟ್ ಪಡೆದುಕೊಂಡು ಆಲ್ಟ್ ನ್ಯೂಸ್ ಸಹ ಸ್ಥಾಪಕ ಝುಬೈರ್ ಬೆನ್ನು ಬಿದ್ದಿದ್ದಾರೆ.

- Advertisement -

ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಕಳೆದ ವರ್ಷ ಇಲ್ಲಿನ ಮೊಹಮ್ಮದಿ ಪೊಲೀಸ್ ಠಾಣೆಯಲ್ಲಿ ಝುಬೈರ್ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ಲಖಿಂಪುರ ಖೇರಿ ಪೊಲೀಸರು ಈಗ ಅದನ್ನು ಕೈಗೆತ್ತಿಕೊಂಡಿದ್ದಾರೆ.

ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಲಖಿಂಪುರ ಖೇರಿಯಲ್ಲಿ ಕೋರ್ಟ್ ನಿರ್ದೇಶನದಂತೆ ಮೊಕದ್ದಮೆ ದಾಖಲಾಗಿತ್ತು. ಲಖಿಂಪುರ ಖೇರಿ ಪೊಲೀಸರು ಸ್ಥಳೀಯ ಕೋರ್ಟಿನಿಂದ ಝುಬೈರ್ ವಿರುದ್ಧ ವಾರಂಟ್ ಆದೇಶ ಪಡೆದು ಸೀತಾಪುರದ ಜಿಲ್ಲಾ ಜೈಲಿನಲ್ಲಿರುವ ಝುಬೈರ್ ಗೆ ನೀಡಿದ್ದಾರೆ.

- Advertisement -

ಜು. 11ರಂದು ಲಖಿಂಪುರ ಖೇರಿ ಕೋರ್ಟಿಗೆ ಹಾಜರಾಗುವಂತೆ ಪೊಲೀಸರು ಝುಬೈರ್ ಗೆ ವಾರಂಟ್ ಹೊರಡಿಸಿದ್ದಾರೆ.

ಲಖೀಂಪುರ ಖೇರಿಯ ಪೊಲೀಸ್ ಸೂಪರಿನ್ ಟೆಂಡೆಂಟ್ ಸಂಜೀವ್ ಸುಮನ್ ಅವರು “ಝುಬೈರ್ ರನ್ನು ಕೋರ್ಟಿಗೆ ಹಾಜರು ಪಡಿಸುವ ಜವಾಬ್ದಾರಿ ಜೈಲು ಅಧಿಕಾರಿಗಳದ್ದು” ಎಂದು ಹೇಳಿದರು.

ಕೋಮು ಸೌಹಾರ್ದವನ್ನು ಕದಡಲು ಝುಬೈರ್ ಟ್ವಿಟರ್ ಮೂಲಕ ಸುಳ್ಳು ಸುದ್ದಿಗಳನ್ನು ಹಾಕುತ್ತಲಿದ್ದಾರೆ ಎಂದು ಆಶಿಸ್ ಕುಮಾರ್ ಕತಿಯಾರ್ ಎನ್ನುವವರು ದೂರು ಸಲ್ಲಿಸಿದ್ದರು. ಎರಡು ಗುಂಪುಗಳ ನಡುವೆ ವೈರ ಹರಡುವ ಅಪರಾಧದ ಭಾರತೀಯ ದಂಡ ಸಂಹಿತೆಯ 153ಎ ಸೆಕ್ಷನ್ ನಂತೆ ಝುಬೈರ್ ಮೇಲೆ ಕೇಸು ದಾಖಲಾಗಿತ್ತು.

ಕಳೆದ ವಾರ ದಿಲ್ಲಿಯಲ್ಲಿ ದಾಖಲಾದ ಕೇಸಿನ ಮೇಲೆ ದಿಲ್ಲಿ ಜೈಲಲ್ಲಿದ್ದ ಝುಬೈರ್ ರನ್ನು ಎರಡು ದಿನಗಳ ಹಿಂದೆ ಸೀತಾಪುರ ಜೈಲಿಗೆ ತರಲಾಗಿತ್ತು. ದಿಲ್ಲಿ ಪೊಲೀಸರು ಝುಬೈರ್ ರನ್ನು ಸ್ಥಳೀಯ ಕೋರ್ಟಿನಲ್ಲಿ ಹಾಜರು ಪಡಿಸಿದಾಗ ಸೀತಾಪುರ ಮೊಕದ್ದಮೆಗೆ ಸಂಬಂಧಿಸಿದಂತೆ ಝುಬೈರ್ ಗೆ ಆರು ದಿನಗಳ ಪೊಲೀಸ್ ರಿಮಾಂಡ್ ಕಸ್ಟಡಿ ನೀಡಲಾಗಿತ್ತು.

ಈ ಬಗ್ಗೆ ಸೀತಾಪುರ ಜೈಲಿನ ಸೂಪರಿನ್ ಟೆಂಡೆಂಟ್ ಸುರೇಶ್ ಸಿಂಗ್ ರನ್ನು ಸಂಪರ್ಕಿಸಿದಾಗ ಅವರು, “ಶುಕ್ರವಾರ ಬೆಳಿಗ್ಗೆ ಸೀತಾಪುರ ಪೊಲೀಸರು ಝುಬೈರ್ ರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಕೆಲವೇ ಗಂಟೆಗಳ ಬಳಿಕ ಅವರು ಮತ್ತೆ ಝುಬೈರ್ ರನ್ನು ಜೈಲಿಗೆ ತಂದು ಬಿಟ್ಟರು. ಸೀತಾಪುರ ಮೊಕದ್ದಮೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟು ಮಧ್ಯಂತರ ಜಾಮೀನು ನೀಡಿದ್ದೇ ಅದಕ್ಕೆ ಕಾರಣ. ಇನ್ನು ಝುಬೈರ್ ವಿರುದ್ಧ ಎರಡು ವಾರಂಟ್ ಗಳು ಬಾಕಿಯಿವೆ. ಒಂದು ದಿಲ್ಲಿ ಮತ್ತಿನ್ನೊಂದು ಲಖಿಂಪುರ ಖೇರಿಯದ್ದು.”  ಎಂದು ಸೂಪರಿನ್ ಟೆಂಡೆಂಟ್ ಸುರೇಶ್ ಸಿಂಗ್ ಹೇಳಿದರು.

ನಾವು ಈಗ ಝುಬೈರ್ ರನ್ನು ಎಲ್ಲಿಗೆ ಕಳುಹಿಸಬೇಕು ಎಂದು ತೀರ್ಮಾನಿಸಬೇಕಾಗಿದೆ. ದಿಲ್ಲಿ ಮತ್ತು ಲಖಿಂಪುರ ಮೊಕದ್ದಮೆಗಳಿಗೆ ಸಂಬಂಧಿಸಿಂತೆ ಝುಬೈರ್ ರಿಗೆ ಜಾಮೀನು ನೀಡಲಾಗಿಲ್ಲ ಎಂದೂ ಸೂಪರಿನ್ ಟೆಂಡೆಂಟ್ ಸುರೇಶ್ ಸಿಂಗ್ ಹೇಳಿದರು.

Join Whatsapp