ಕಾನ್ಪುರ: ಉತ್ತರ ಪ್ರದೇಶದಲ್ಲಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ವೇಳೆ ತಾಯಿ- ಮಗಳು ಸಜೀವದಹನವಾಗಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿದೆ.
ಕಾನ್ಪುರ ದೆಹಾತ್ ಜಿಲ್ಲೆಯ ಗ್ರಾಮವೊಂದರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ 45 ವರ್ಷದ ಪ್ರಮೀಳಾ ದೀಕ್ಷಿತ್ ಮತ್ತು ಆಕೆಯ 20 ವರ್ಷದ ಪುತ್ರಿ ನೇಹಾ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.
“ಯೋಗಿ (ಆದಿತ್ಯನಾಥ್) ಸರ್ಕಾರದ ಅಡಿಯಲ್ಲಿ, ಬ್ರಾಹ್ಮಣ ಕುಟುಂಬಗಳನ್ನು ಗುರಿಯಾಗಿಸಲಾಗಿದೆ. ಅಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ದಲಿತರು ಮತ್ತು ಹಿಂದುಳಿದವರಂತೆ ಬ್ರಾಹ್ಮಣರು ಕೂಡ ಯೋಗಿ ಸರ್ಕಾರದ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ” ಎಂದು ವಿರೋಧ ಪಕ್ಷ ಸಮಾಜವಾದಿ ಪಕ್ಷ ಟ್ವೀಟ್ ಮಾಡಿ ಆರೋಪಿಸಿದೆ.
ಮಹಿಳೆಯರು ಗುಡಿಸಿಲಿನ ಒಳಗೆ ಇರುವಾಗಲೇ ಪೊಲೀಸರು ಅದಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅವರಿಬ್ಬರು ತಮಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಸೋಮವಾರ ದೂರಿದ್ದಾರೆ. ಆದರೆ ಪೊಲೀಸರು ಈಗ 13 ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಬುಲ್ಡೋಜರ್ ಆಪರೇಟರ್ ಸೇರಿದ್ದಾರೆ. ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ಮತ್ತು ಉದ್ದೇಶಪೂರ್ವಕವಾಗಿ ಗಾಸಿ ಉಂಟುಮಾಡಿದ ಪ್ರಕರಣಗಳನ್ನು ಕೂಡ ದಾಖಲು ಮಾಡಲಾಗಿದೆ.
ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಭೀಕರ ದುರಂತ ನಡೆದಿದೆ. ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಲು ಪೊಲೀಸರು, ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಿಢೀರನೆ ಬುಲ್ಡೋಜರ್ ಸಮೇತ ಪ್ರತ್ಯಕ್ಷವಾಗಿದ್ದರು. ಅವರು ತೆರವು ಕಾರ್ಯಾಚರಣೆಗೂ ಮುನ್ನ ನೋಟಿಸ್ ನೀಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.