ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಬಂಡಾಯವೆದ್ದಿರುವ ಉತ್ತರ ಪ್ರದೇಶದ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ದಿನೇಶ್ ಖಟಿಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಉತ್ತರ ಪ್ರದೇಶದ ಹಸ್ತಿನಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಖಟಿಕ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ.
ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರವಿದೆ ಎಂದು ಆರೋಪಿಸಿರುವ ಅವರು, ತಾವು “ಸಮಾಜದ ದೀನದಲಿತ ವರ್ಗಕ್ಕೆ” ಸೇರಿದವರಾಗಿರುವುದರಿಂದ ತಮ್ಮ ಇಲಾಖೆಯ ಅಧಿಕಾರಿಗಳು ತಮ್ಮ ಆದೇಶಗಳನ್ನು ಪಾಲಿಸುವುದಿಲ್ಲ ಮತ್ತು ನಿರ್ಲಕ್ಷಿಸುತ್ತಾರೆ ಎಂದು ಸಚಿವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಖಟಿಕ್ ಅವರು, ತಮ್ಮ ಇಲಾಖೆಯಲ್ಲಿರುವ ಅಧಿಕಾರಿಗಳ ವರ್ಗಾವಣೆ ಮತ್ತು ಹಸ್ತಿನಾಪುರದ ತಮ್ಮ ಬೆಂಬಲಿಗರ ಮೇಲೆ ಎಫ್ ಐಆರ್ ದಾಖಲಿಸಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಮಂಗಳವಾರ ನಡೆದ ಸಚಿವ ಸಂಪುಟ ಸಭೆಗೂ ಖತಿಕ್ ಗೈರಾಗಿದ್ದರು. ಜೊತೆಗೆ ಪಿಡಬ್ಲ್ಯೂಡಿ ಸಚಿವ ಜಿತಿನ್ ಪ್ರಸಾದ್ ಕೂಡ ಸರ್ಕಾರದ ನಡವಳಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿದೆ.