ವಾರಣಾಸಿ: ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ ವಾರಣಾಸಿಯ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮೂರು ದಶಕಗಳಷ್ಟು ಹಳೆಯದಾದ ನಕಲಿ ಗನ್ ಲೈಸೆನ್ಸ್ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್-ರಾಜಕಾರಣಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಸಂಸದ-ಶಾಸಕರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅವನೀಶ್ ಗೌತಮ್ ಈ ತೀರ್ಪು ನೀಡಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ವಿನಯ್ ಸಿಂಗ್ ಅವರು ತಿಳಿಸಿದ್ದಾರೆ.
ಮುಖ್ತಾರ್ ಅನ್ಸಾರಿ ವಿರುದ್ಧ ಡಿಸೆಂಬರ್ 1990 ರಲ್ಲಿ ಗಾಜಿಪುರ ಜಿಲ್ಲೆಯ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಜೊತೆಗೆ ಐಪಿಸಿ ಸೆಕ್ಷನ್ 467 (ನಕಲಿ), 468 (ವಂಚನೆ ಉದ್ದೇಶಕ್ಕಾಗಿ ಫೋರ್ಜರಿ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದೇ ಪ್ರಕರಣದಲ್ಲಿ ಇಂದು ಅನ್ಸಾರಿಗೆ ಶಿಕ್ಷೆಯಾಗಿದೆ.
ಅನ್ಸಾರಿ 2021ರಿಂದ ಬಂದಾ ಜೈಲಿನಲ್ಲಿದ್ದಾರೆ. ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು.
ಉತ್ತರ ಪ್ರದೇಶ, ಪಂಜಾಬ್, ನವದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಅನ್ಸಾರಿ ವಿರುದ್ಧ ಸುಮಾರು 60 ಪ್ರಕರಣಗಳು ಬಾಕಿ ಇದ್ದು, ಗ್ಯಾಂಗ್ ಸ್ಟರ್, ರಾಜಕಾರಣಿಗೆ ಇದುವರೆಗೆ ಕನಿಷ್ಠ ಏಳು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಓರ್ವರು ತಿಳಿಸಿದ್ದಾರೆ.