ದಕ್ಷಿಣ ಕನ್ನಡ: ಕಾಲಮಿತಿಯೊಳಗೆ ಎಸ್’ಸಿಪಿ, ಟಿಎಸ್’ಪಿ ಅನುದಾನ ಬಳಸಲು ಜಿ.ಪಂ. ಸಿಇಓ ಡಾ. ಕುಮಾರ್ ಸೂಚನೆ

Prasthutha|

ಮಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭ್ಯುದಯಕ್ಕಾಗಿ ವಿವಿಧ ಇಲಾಖೆಗಳಿಗೆ ಹಲವು ಯೋಜನೆಗಳಡಿ ಬಿಡುಗಡೆ ಮಾಡಲಾಗುವ ಅನುದಾನವನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ವೆಚ್ಚ ಮಾಡಿ, ನೀಡಲಾದ ಗುರಿ ಸಾಧಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ತಿಳಿಸಿದರು.

- Advertisement -


ಅವರು ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವಿಶೇಷ ಘಟಕ ಮತ್ತು ಪರಿಶಿಷ್ಟ ವರ್ಗಗಳ ಉಪಯೋಗ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಎಸ್ ಸಿ ಪಿ ಹಾಗೂ ಟಿ ಎಸ್ ಪಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನದ ಸದ್ಬಳಕೆಯಾಗಬೇಕು, ಅರ್ಹ ಫಲಾನುಭವಿಗಳಿಗೆ ಆ ಯೋಜನೆಗಳ ಲಾಭ ದೊರೆಯಬೇಕು, ಅದಕ್ಕಾಗಿ ಆ ಯೋಜನೆಗಳಡಿ ಸರ್ಕಾರ ನೀಡುವ ಅನುದಾನ ಕಾಲಮಿತಿಯೊಳಗೆ ವಿನಿಯೋಗವಾಗಬೇಕು, ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸಂಬಂಧಿಸಿದ ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.

- Advertisement -


ಇದೀಗ ಡಿಸೆಂಬರ್ ತಿಂಗಳು ಮುಕ್ತಾಯವಾಗುತ್ತಿದ್ದರೂ ಕೆಲವು ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ಕಂಡುಬಂದಿಲ್ಲ, ಆದ ಕಾರಣ ಶೇ. 70ಕ್ಕೂ ಕಡಿಮೆ ಪ್ರಗತಿ ಸಾಧಿಸಿದ ಇಲಾಖೆಗಳ ವಿರುದ್ಧ ಕಾಯ್ದೆಯನುಸಾರ ಕ್ರಮಕೈಗೊಳ್ಳುವಂತೆ ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ ಅವರಿಗೆ ಸೂಚನೆ ನೀಡಿದರು.
ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಫಲಾನುಭವಿಗಳ ಆಯ್ಕೆಯಾಗಬೇಕು, ಆಯ್ಕೆ ವಿಳಂಬಕ್ಕೆ ಆಸ್ಪದವಾಗದಂತೆ ಗಮನ ಹರಿಸಬೇಕು, ಎಸ್’ಸಿಪಿ ಹಾಗೂ ಟಿಎಸ್’ಪಿ ಯೋಜನೆಯಡಿ ಸೂಕ್ತ ಪ್ರಗತಿ ಸಾಧಿಸದ ಸಹಕಾರ ಇಲಾಖೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಮುಖ್ಯಸ್ಥರಿಗೆ ಕೂಡಲೇ ನೋಟೀಸ್ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಓ ಸೂಚಿಸಿದರು.


ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮದಡಿ ಇನ್ನೂ ಅನುದಾನ ಬಿಡುಗಡೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಸಂಬಂಧಿಸಿದ ನಿಗಮಗಳ ಎಂಡಿಯವರಿಂದ ಸ್ಪಷ್ಟೀಕರಣ ಪಡೆಯುವಂತೆಯೂ ಅವರು ಹೇಳಿದರು.


ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮಹಾನಗರ ಪಾಲಿಕೆಯ ಆಡಳಿತದ ಉಪ ಆಯುಕ್ತ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪಾಪ ಭೋವಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp