► ಖಾದರ್ ಮತ್ತು ರಮಾನಾಥ ರೈ ಬಿಜೆಪಿಗೆ ಬೇಡವೆಂದಿದ್ದ ನಳಿನ್ ಕುಮಾರ್
ಯು. ಟಿ. ಖಾದರ್ ಮತ್ತು ರಮನಾಥ ರೈ ಇಬ್ಬರನ್ನು ಹೊರತು ಪಡಿಸಿದ ಎಲ್ಲಾ ಕರಾವಳಿಯ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಕರೆ ತನ್ನಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಯು ಟಿ ಖಾದರ್, “ಬಹುಶಃ ನಳಿನ್ ಕುಮಾರ್ ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದ ವೇಳೆ ಇರುವ ಹಳೆಯ ನೆನಪುಗಳು ಮರುಕಳಿಸಿರಬೇಕು. ಅದಕ್ಕಾಗಿ ಎಲ್ಲಾ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಕರೆ ತನ್ನಿ ಎಂದು ಹೇಳುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಈ ಹಿಂದೆ ವಿನಯ್ ಕುಮಾರ್ ಸೊರಕೆ ಜೊತೆ ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದಾರೆ. ಅವರಿಗೆ ಹಿಂದಿನ ಎಲ್ಲಾ ನೆನಪುಗಳು ಈಗ ಬಂದಿರಬೇಕು. ಅದಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಖಾದರ್ ಹೇಳಿದ್ದಾರೆ. ನಳಿನ್ ಕುಮಾರ್ ಅವರಿಗೆ ಎಲ್ಲಾ ಕಾಂಗ್ರೆಸ್ಸಿಗರು ಬಿಜೆಪಿಯಲ್ಲಿರಬೇಕೆಂಬ ಆಸೆ ಇರಬೇಕು. ಅದಕ್ಕಾಗಿ ನಮ್ಮ ಕಾರ್ಯಕರ್ತರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಆದರೆ ಅಷ್ಟೊಂದು ಕಾರ್ಯಕರ್ತರು ಬಿಜೆಪಿಗೆ ಸೇರೋದು ಕಷ್ಟ. ಹಾಗಾಗಿ ನಳಿನ್ ಅವರೇ ಕಾಂಗ್ರೆಸ್ಸಿಗೆ ಬರಲಿ. ನಳಿನ್ ಅವರು ನೆಮ್ಮದಿಯಿಂದ ಇರಬೇಕಾದರೆ ಅವರೇ ಬೇಕಾದರೆ ಕಾಂಗ್ರೆಸ್ ಸೇರಲಿ ಎಂದು ಯು ಟಿ ಖಾದರ್ ತಿರುಗೇಟು ನೀಡಿದ್ದಾರೆ.