‘ನಕಲಿ ಸರ್ಟಿಫಿಕೇಟ್ ಪಡೆದುಕೊಂಡು ಇಲ್ಲಿ ಮಾತನಾಡುತ್ತೀರಾ’: ರೇಣುಕಾಚಾರ್ಯ ವಿರುದ್ಧ ಯು.ಟಿ. ಖಾದರ್ ಗರಂ

Prasthutha|

ಬೆಂಗಳೂರು: ಬುಧವಾರದ ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷದ ಉಪನಾಯಕ ಯುಟಿ ಖಾದರ್ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ದಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ವಿಚಾರವಾಗಿ ಯು. ಟಿ. ಖಾದರ್ ಮಾತನಾಡುವ ವೇಳೆ ಎಂ.ಪಿ ರೇಣುಕಾಚಾರ್ಯ ಮಧ್ಯಪ್ರವೇಶಿಸಿದ್ದಾರೆ. ಇದಕ್ಕೆ ಗರಂ ಆದ ಖಾದರ್ ‘ನಕಲಿ ಸರ್ಟಿಫಿಕೇಟ್ ಪಡೆದುಕೊಂಡು ಇಲ್ಲಿ ಮಾತನಾಡುತ್ತೀರಾ’ ಎಂದು ತಿರುಗೇಟು ಕೊಟ್ಟಿದ್ದಾರೆ.

- Advertisement -


ಯುಟಿ ಖಾದರ್ ಸರ್ಟಿಫಿಕೇಟ್ ಹೇಳಿಕೆ ಬಿಜೆಪಿ ಶಾಸಕ, ಸಚಿವರನ್ನು ಕೆರಳಿಸಿದೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು ಸಾಬೀತಾದರೆ ನಾನು ಗಲ್ಲಿಗೇರಲು ಸಿದ್ಧ ಎಂದು ಎಂ.ಪಿ ರೇಣುಕಾಚಾರ್ಯ ಆರೋಪದ ವಿರುದ್ಧ ಕಿಡಿಕಾರಿದ್ದಾರೆ. ನಾನು ಜಾತ್ಯತೀತ ವ್ಯಕ್ತಿ. ಒಂದು ಜಾತಿಗೆ ಸೀಮಿತವಾಗಿಲ್ಲ. ಸರ್ಕಾರದ ಸವಲತ್ತು ಪಡೆದಿದ್ದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ ಎಂದು ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ.


ನನ್ನ ಸಹೋದರ ಉಮೇಶ್ ಜಾಧವ್ ಈ ಹಿಂದೆ ಗುಲ್ಬರ್ಗಾದಲ್ಲಿ ಸ್ಪರ್ಧೆ ಮಾಡಿದ್ದರು, ನಾವು ಇಬ್ಬಾಗ ಆಗಿ 25 ವರ್ಷಗಳೇ ಕಳೆದಿವೆ. ನನ್ನನ್ನು ಎಲ್ಲಾ ಸಮುದಾಯದವರು ಗೌರವಿಸುತ್ತಾರೆ. ನನ್ನ ನಕಲಿ ಸರ್ಟಿಫಿಕೇಟ್ ಇದ್ದರೆ ಬಿಡುಗಡೆ ಮಾಡಬೇಕು ಎಂದು ಸವಾಲನ್ನೆಸೆದರು. ಗುಲ್ಬರ್ಗಾದಲ್ಲಿ ನನ್ನ ಸಹೋದರ ಸ್ಪರ್ಧಿಸಿದ ಸಂದರ್ಭ ನಾಮಪತ್ರ ವಾಪಸ್ ಪಡೆಯುವಂತೆ ನಾನೇ ಒತ್ತಾಯಿಸಿದ್ದೆ ಎಂದು ಹೇಳಿದರು.

- Advertisement -


ಸದನದಲ್ಲಿ ಬಿಜೆಪಿ ಸದಸ್ಯ ಪಿ. ರಾಜೀವ್, ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನಲ್ಲಿ ಮೇಲ್ಜಾತಿಯವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ರೇಣುಕಾಚಾರ್ಯ ಹೆಸರನ್ನು ಉಲ್ಲೇಖಿಸಿ ಗೂಳಿಹಟ್ಟಿ ಶೇಖರ್ ಧ್ವನಿಗೂಡಿಸಿದ್ದರು. ಇಂದು ಇದೇ ವಿಚಾರಕ್ಕೆ ಸಂಬಂಧಿಸಿ ಖಾದರ್, ರೇಣುಕಾಚಾರ್ಯರ ಕಾಲೆಳೆದಿದ್ದಾರೆ.

ಇದೇ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ರೇಣುಕಾಚಾರ್ಯ ನಕಲಿ ಸರ್ಟಿಫಿಕೇಟ್ ಬಳಸಿದ್ದಾರೆ ಎನ್ನುವ ಆರೋಪ ಸರಿಯಲ್ಲ. ಈ ಮಾತನ್ನು ಕಡತದಿಂದ ತೆಗೆದು ಹಾಕುವಂತೆ ವಿನಂತಿಸಿದರು.




Join Whatsapp