ಸಚಿವ ಸ್ಥಾನದಲ್ಲೇ ಮುಂದುವರೆದು ತನಿಖೆ ಎದುರಿಸ್ತೀನಿ ಅನ್ನೋದು ಕೆಟ್ಟ ಸಂಪ್ರದಾಯ: ಈಶ್ವರಪ್ಪ ವಿರುದ್ಧ ಯುಟಿ ಖಾದರ್ ವಾಗ್ದಾಳಿ

Prasthutha|

ಮಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯುಟಿ ಖಾದರ್, ತಕ್ಷಣವೇ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅದಲ್ಲದೇ ಸಚಿವ ಸ್ಥಾನದಲ್ಲೇ ಮುಂದುವರೆದು ತನಿಖೆ ಎದುರಿಸ್ತೀನಿ ಅನ್ನೋದು ಕೆಟ್ಟ ಸಂಪ್ರದಾಯ ಎಂದು ಕಿಡಿಕಾರಿದ್ದಾರೆ,

- Advertisement -

ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾಗಿದ್ದ, ಬಿಜೆಪಿಗೆ ತಮ್ಮ ಕಾರ್ಯಕರ್ತರನ್ನೇ ಬದುಕಿಸ್ಲಿಕ್ಕೆ ಆಗುತ್ತಿಲ್ಲ, ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಖಾದರ್ ಪ್ರಶ್ನಿಸಿದ್ದಾರೆ.FIR ದಾಖಲಾದ ತಕ್ಷಣವೇ ಈ ಹಿಂದೆ ಸಚಿವರು ರಾಜೀನಾಮೆ ನೀಡಿದ ಇತಿಹಾಸವಿದೆ, ಆದರೆ ಸಂತೋಷ್ ಸಾವಿನ ವಿಚಾರಕ್ಕೆ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡದೇ ಇರುವುದು ಬಿಜೆಪಿಯ ಮುಖವಾಡ ಬಯಲು ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಡಿವೈಎಸ್ಪಿ ಗಣಪತಿ ಪ್ರಕರಣದಕ್ಕೆ ಸಂಬಂಧಿಸಿ ಅಂದಿನ ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿದ್ದರು, ಅಲ್ಲದೇ ಆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೂ ಸಿಬಿಐ ಗೆ ವಹಿಸಲಾಗಿತ್ತು ಎಂದಿದ್ದಾರೆ.

ಈಶ್ವರಪ್ಪರ 40% ಕಮೀಷನ್ ಬಗ್ಗೆ ಪಿಎಂ, ಸಿಎಂ, ಬಿಜೆಪಿ ನಾಯಕರಿಗೆ ಸಂತೋಷ್ ಪತ್ರ ಬರೆದಿದ್ದರು, ಆದರೆ “ನಾ ಖಾವೂಂಗಾ, ನಾ ಖಾನಾ ದೂಂಗಾ” ಎನ್ನುವವರು ಯಾಕಾಗಿ ತನಿಖೆ ನಡೆಸಿರಲಿಲ್ಲ ಎಂದು ಪ್ರಶ್ನಿಸಿರುವ ಖಾದರ್, ತನಿಖೆಯನ್ನು ಸಿಬಿಐ ಗೆ ವಹಿಸಿ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 ಆರೋಪಿಯಾಗಿ ಪ್ರಕರಣ ದಾಖಲಾದ ಸಂದರ್ಭದಲ್ಲಿ ಯಾವುದೇ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಮಾಡಿಕೊಡುತ್ತಾ ಬಂದಿರುವವುದು ಈ ಹಿಂದೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಶ್ವರಪ್ಪ ಈ ಸಂಪ್ರದಾಯವನ್ನು ಪಾಲಿಸದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ ಎಂದು ಖಾದರ್ ಟೀಕಿಸಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಸಚಿವ ಕೆ.ಜೆ.ಜಾರ್ಜ್ ಅವರ ಮೇಲಿನ ಆರೋಪ ದಾಖಲಾದಾಗ ಅವರು ರಾಜೀನಾಮೆ ನೀಡಿದ್ದರು. ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೂ ವಹಿಸಿತ್ತು. ಸರ್ಕಾರದ ಕಾಮಗಾರಿಯಲ್ಲಿ ಶೇ 40 ಕಮೀಷನ್ ನೀಡಬೇಕು ಎಂದು ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಇದೀಗ ಬಿಜೆಪಿ ಪಕ್ಷದ ಕಾರ್ಯಕರ್ತನಿಗೆ ರಕ್ಷಣೆ ಇಲ್ಲದೆ, ನ್ಯಾಯ ದೊರೆಯದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಿಜೆಪಿ ಆಡಳಿತದಿಂದ ಆಗಿದೆ. ಪರಮೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐಗೆ ವಹಿಸಿತ್ತು. ಆದರೆ ಬಿಜೆಪಿ ಸರಕಾರ ಆ ವರದಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ ಎಂದು ಖಾದರ್ ಆರೋಪಿಸಿದ್ದಾರೆ.

 ದಾಖಲೆ ಇಲ್ಲ ಎಂದರೆ ಸರಕಾರದ ಇಲಾಖೆಯ ಕಾಮಗಾರಿಯನ್ನು ಸರಕಾರಿ ಸ್ಥಳದಲ್ಲಿ ಗುತ್ತಿಗೆದಾರ ಸರಕಾರದ ಇಂಜಿಯರ್ ಗಳ ಮೂಲಕ ಹೇಗೆ ಮಾಡಲು ಸಾಧ್ಯ?  ಈ ಪ್ರಕರಣದಿಂದ ಬಿಜೆಪಿ ಯ ನಿಜವಾದ ಬಣ್ಣ ಬಯಲಾಗಿದೆ ಎಂದು ಖಾದರ್ ಟೀಕಿಸಿದರು.

ರಾಜೀನಾಮೆ ನೀಡದಿದ್ದರೆ ಜೈಲ್ ಬರೋ : ಸಚಿವ ಈಶ್ವರಪ್ಪರ ಮೇಲೆ ಆರೋಪಿಯಾಗಿದ್ದರೂ ಸಿ.ಎಂ.ಸಹಿತ ಸಚಿವ ಸಂಪುಟ ಅವರ ಬೆಂಬಲಕ್ಕೆ ನಿಂತಿರುವುದು ಸರಕಾರದ ಯೋಗ್ಯತೆಯನ್ನು ತಿಳಿಸುತ್ತದೆ. ಈಶ್ವರಪ್ಪ ರಾಜೀನಾಮೆ ನೀಡುವವರೆಗೆ ಕಾಂಗ್ರೆಸ್ ಜೈಲ್ ಬರೋ ಸೇರಿದಂತೆ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

 ಸಂತೋಷ್ ಪಾಟೀಲ್ ಮಾ.9ರಂದು ಈಶ್ವರಪ್ಪ ರ ವಿರುದ್ಧ ಭೃಷ್ಟಾಚಾರದ ಆರೋಪ ಮಾಡಿ ಆತ್ಮಹತ್ಯೆ ಮಾಡುವ ಹೇಳಿಕೆ ನೀಡಿದ್ದರೂ ಸರಕಾರ ಮತ್ತು ಬಿಜೆಪಿ ಗಮನ ಹರಿಸದೆ ಆತನ ಸಾವಿನ ಹೊಣೆಗಾರರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡೆ ಮಮತಾ ಗಟ್ಟಿ ಆರೋಪಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾದ ಸದಾಶಿವ ಉಳ್ಳಾಲ್,ನವೀನ್ ಡಿ ಸೋಜ,ಶುಭೋದಯ ಆಳ್ವ,ಸಂತೋಷ್ ಶೆಟ್ಟಿ, ಲಾರೆನ್ಸ್, ಯುವ ಕಾಂಗ್ರೆಸ್ ದ.ಕ ಜಿಲ್ಲಾ ಧ್ಯಕ್ಷ ಲುಕ್ಮಾನ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.



Join Whatsapp