ಭಯೋತ್ಪಾದಕರು ಮದ್ರಸಾಗಳಲ್ಲಿ ಕಲಿತವರು: ಮಧ್ಯ ಪ್ರದೇಶ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ವಿವಾದಾಸ್ಪದ ಹೇಳಿಕೆ
Prasthutha: October 21, 2020

►► ಜಮ್ಮು-ಕಾಶ್ಮೀರ ಭಯೋತ್ಪಾದಕರ ಕಾರ್ಖಾನೆ ಎಂದ ಸಚಿವೆ
ಭೋಪಾಲ್: ಎಲ್ಲಾಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಮದ್ರಸಾಗಳಲ್ಲಿ ಕಲಿತವರು ಎಂದು ಮಧ್ಯ ಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
“ನೀವು ಈ ದೇಶದ ನಾಗರಿಕರಾಗಿದ್ದರೆ, ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಮದ್ರಾಸಾಗಳಲ್ಲಿ ಕಲಿತಿರುವುದನ್ನು ಕಾಣಬಹುದು. ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆಯ ಕಾರ್ಖಾನೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಮಕ್ಕಳನ್ನು ರಾಷ್ಟ್ರೀಯತೆಯ ಸಂಪರ್ಕಕ್ಕೆ ತರಲು ವಿಫಲವಾಗುವ ಮದ್ರಸಾಗಳನ್ನು “ಸಮಾಜದ ಸಾಮೂಹಿಕ ಪ್ರಗತಿ”ಗಾಗಿ ಮುಖ್ಯವಾಹಿನಿ ಶಿಕ್ಷಣದಡಿ ತೆಗೆದುಕೊಂಡು ಬರಬೇಕು ಎಂದು ಅವರು ಹೇಳಿದ್ದಾರೆ.
ತನ್ನ ಹೇಳಿಕೆಯನ್ನು ಬೆಂಬಲಿಸುವುದಕ್ಕಾಗಿ ಆಕೆ ಮದ್ರಸಾಗಳನ್ನು ಮುಚ್ಚುವ ಅಸ್ಸಾಮ್ ನ ಇತ್ತೀಚಿನ ಪ್ರಕಟನೆಯನ್ನು ಉಲ್ಲೇಖಿಸಿದರು. “ಅಸ್ಸಾಂ ಇದನ್ನು ಯಶಸ್ವಿಗೊಳಿಸಿ ತೋರಿಸಿದೆ…. ರಾಷ್ಟ್ರೀಯತೆಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಎಲ್ಲಾ ಸಂಸ್ಥೆಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ಭಾಗವಾಗಿ ಮುಚ್ಚಬೇಕು” ಎಂದು ಅವರು ಹೇಳಿದರು.
