ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ IAS ಅಧಿಕಾರಿಗಳ ಬಳಕೆ: ಕುಮಾರಸ್ವಾಮಿ

Prasthutha|

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲೇಬೇಕೆಂದು ಪ್ರತಿಪಕ್ಷಗಳು ಶಪಥ ಮಾಡಿದ್ದು, ಇದಕ್ಕಾಗಿಯೇ ಬೆಂಗಳೂರಿನಲ್ಲಿ ಇಂದು ರಾಷ್ಟ್ರಮಟ್ಟದ ವಿಪಕ್ಷಗಳೆಲ್ಲ ಸೇರಿ ಸಭೆ ನಡೆಸಲಿದೆ.

- Advertisement -

ಆದರೆ, ಹೊರರಾಜ್ಯಗಳಿಂದ ಆಗಮಿಸಿರುವ ರಾಜಕಾರಣಿಗಳ ಸೇವೆಗೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.

- Advertisement -


ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆಥಿತ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


135 ಸೀಟು ಕೊಟ್ಟ ತಪ್ಪಿಗೆ ಕನ್ನಡಿಗರಿಗೆ ವಿಪರೀತ ದರ್ಪ ತೋರಿದೆ ಕಾಂಗ್ರೆಸ್. ಸತ್ಯಯುಗದಲ್ಲಿ ಹಿರಣ್ಯಕಶಿಪು ಅಷ್ಟದಿಕ್ಪಾಲಕರನ್ನು ಸೆರೆಹಿಡಿದು ಮೆಟ್ಟಿಲು ಮಾಡಿಕೊಂಡ ಪಾಪಕ್ಕೆ ಸರ್ವನಾಶವಾದ. ಕಾಂಗ್ರೆಸ್ ಕೂಡ 30 ಐಎಎಸ್ ಅಧಿಕಾರಿಗಳನ್ನು ರಾಜಕಾರಣಿಗಳ ದ್ವಾರಪಾಲಕರನ್ನಾಗಿ ಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದೆ ಎಂದು ಕಿಡಿಕಾರಿದ್ದಾರೆ.


ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’ಯನ್ನು ಜಾರಿಗೆ ತರುವ ಮೂಲಕ ಹೊಸ ನಮೂನೆಯ ‘ರಾಜಕೀಯ, ಆಡಳಿತ ವಸಾಹತುಶಾಹಿ’ಯನ್ನು ದೇಶಕ್ಕೆ ಪರಿಚಯ ಮಾಡಿದೆ. ಹೌದು; ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೇ ಕುಖ್ಯಾತಿ. ಅಂಥ ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.


ಇನ್ನು ಶಿಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಆ ಎಲ್ಲ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದರ ಹೊರತಾಗಿ ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯಾವ ಪಾತ್ರವೂ ಇಲ್ಲ. ಈ ರೀತಿಯ ಶಿಷ್ಟಾಚಾರದ ಪಾಲನೆ ಹಿಂದಿನ ಎಲ್ಲ ಸರ್ಕಾರದ ಕಾಲದಲ್ಲಿಯೂ ನಡೆದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.



Join Whatsapp