ಪ್ರಚಾರಕ್ಕೆ ಯೋಧರು, ಸರಕಾರಿ ನೌಕರರ ಬಳಕೆ: “ಅಪಾಯಕಾರಿ ಹೆಜ್ಜೆಯಾಗಿದೆ”  ಎಂದು ಪ್ರಧಾನಿಗೆ ಪತ್ರ ಬರೆದ ಖರ್ಗೆ

Prasthutha|

ನವದೆಹಲಿ: ಸರ್ಕಾರಿ ಯೋಜನೆಗಳನ್ನು ಪ್ರಚಾರ ಪಡಿಸಲು ಸರಕಾರಿ ನೌಕರರನ್ನು ಮತ್ತು ಸಶಸ್ತ್ರ ಪಡೆಗಳನ್ನು ಬಳಸಿದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು  ಆಗ್ರಹಿಸಿದ್ದಾರೆ.

- Advertisement -

ಅ.18 ರ ಸರಕಾರದ ಆದೇಶವನ್ನು ಉಲ್ಲೇಖಿಸಿದ ಖರ್ಗೆ, ಇದರಲ್ಲಿ ಬಿಜೆಪಿ ಸರಕಾರದ 9 ವರ್ಷಗಳ ಸಾಧನೆಗಳನ್ನು ಪ್ರಚಾರ ಮಾಡಲು ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಶ್ರೇಣಿಯ ಹಿರಿಯ ಅಧಿಕಾರಿಗಳನ್ನು ಕಾರ್ಯನಿರ್ವಹಿಸಲು ಕೇಂದ್ರ ಸೂಚಿಸಿದೆ ಎಂದು ಹೇಳಲಾಗಿದೆ. ಈ ಆದೇಶವು ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು 1964ನ್ನು ಉಲ್ಲಂಘಿಸಿದೆ. ಈ ನಿಯಮ ಯಾವುದೇ ಸರ್ಕಾರಿ ನೌಕರರು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂದು ನಿರ್ದೇಶಿಸುತ್ತದೆ. ಸರಕಾರದ ಆದೇಶವು ಇದರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಮೋದಿ ಆಡಳಿತದ ಪ್ರಚಾರಕ್ಕಾಗಿ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿದ ಮಲ್ಲಿಕಾರ್ಜುನ ಖರ್ಗೆ, ಪತ್ರದಲ್ಲಿ ಅ.9 ರಂದು ರಕ್ಷಣಾ ಸಚಿವಾಲಯ ಹೊರಡಿಸಿದ ಮತ್ತೊಂದು ಆದೇಶವನ್ನು ಉಲ್ಲೇಖಿಸಿದ್ದಾರೆ. ಸೈನಿಕರು ತಮ್ಮ ವಾರ್ಷಿಕ ರಜೆಯ ಸಮಯದಲ್ಲಿ ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡುವಂತೆ ಅದರಲ್ಲಿ ನಿರ್ದೇಶಿಸಲಾಗಿತ್ತು.

- Advertisement -

ನಮ್ಮ ಸೈನಿಕರ ನಿಷ್ಠೆ ರಾಷ್ಟ್ರ ಮತ್ತು ಸಂವಿಧಾನಕ್ಕೆ ಇರುತ್ತದೆ. ಅವರನ್ನು  ಸರ್ಕಾರದ ಯೋಜನೆಗಳ ಮಾರ್ಕೆಟಿಂಗ್ ಏಜೆಂಟ್‌ಗಳಾಗುವಂತೆ ಒತ್ತಾಯಿಸುವುದು ರಾಜಕೀಯಕ್ಕೆ ಬಳಸೋದು ಅಪಾಯಕಾರಿ ಹೆಜ್ಜೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Join Whatsapp