ಲಕ್ನೋ: ಮಸೀದಿಯಲ್ಲಿ ಆಝಾನ್ ಕೂಗಲು ಧ್ವನಿವರ್ಧಕ ಬಳಸುವುದು ಮುಸ್ಲಿಮರ ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಮಸೀದಿಯಲ್ಲಿ ಮೊಳಗುವ ಆಝಾನ್ ಗೆ ವಿರುದ್ಧವಾಗಿ ಅಲಹಾಬಾದ್ ನಾದ್ಯಂತ ಧ್ವನಿವರ್ಧಕದ ಮೂಲಕ ಭಜನೆ ಪ್ರಾರಂಭಿಸುವುದಾಗಿ ಸಂಘಪರಿವಾರ ಸಂಘಟನೆಗಳು ಘೋಷಿಸಿದ ಬೆನ್ನಲ್ಲೇ, ಅಲಹಾಬಾದ್ ನ್ಯಾಯಪೀಠದಿಂದ ಮಹತ್ವದ ಆದೇಶ ಹೊರಬಿದ್ದಿದೆ.
ಉತ್ತರ ಪ್ರದೇಶದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇಧಿಸಿದ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ, ಇದು ಕಾನೂನು ಬಾಹಿರ ಮತ್ತು ಮುಸ್ಲಿಮರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿ ಇರ್ಫಾನ್ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಕುಮಾರ್ ಬಿರ್ಲಾ ಮತ್ತು ವಿಕಾಶ್ ಬುಧ್ವಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ತಪ್ಪು ಗ್ರಹಿಕೆಯಿಂದ ಸಲ್ಲಿಸಲಾಗಿರುವ ಈ ಅರ್ಜಿಯನ್ನು ವಜಾಗೊಳಿಸುವುದಾಗಿ ತಿಳಿಸಿದ್ದಾರೆ.
ಧ್ವನಿವರ್ಧಕ ಬಳಕೆಯ ನಿರಾಕರಣೆಗೆ ಅಧಿಕಾರಿಗಳು ಸೂಕ್ತ ಸ್ಪಷ್ಟನೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.