ಶ್ರೀನಗರದಲ್ಲಿ ಮಾನವ ಗುರಾಣಿಯಾಗಿ ನಾಗರಿಕರ ಬಳಕೆ; ಹೈದರ್ ಪೊರ ಎನ್ ಕೌಂಟರ್ ನಲ್ಲಿ ಮತ್ತೊಮ್ಮೆ ಸಾಬೀತು

Prasthutha|

ಶ್ರೀನಗರ : ಶ್ರೀನಗರದ ಹೈದರ್ ಪೋರಾ ಪ್ರದೇಶದಲ್ಲಿ ನಡೆದ ಶೂಟ್ ಔಟ್ ಸಂದರ್ಭದಲ್ಲಿ ನಾಗರಿಕರನ್ನು ಮಾನವ ಗುರಾಣಿ ಆಗಿಸಿಕೊಂಡಿರುವುದರ ಸಂಬಂಧ ನಂಬಲರ್ಹವಾದ ಸ್ವತಂತ್ರ ತನಿಖೆ ನಡೆಸುವಂತೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ಹಕ್ಕುಗಳ ಸಂಸ್ಥೆ ಎಚ್ ಆರ್ ಡಬ್ಲ್ಯು- ಹ್ಯೂಮನ್ ರೈಟ್ಸ್ ವಾಚ್ ಒತ್ತಾಯಿಸಿದೆ.

- Advertisement -


“ಭದ್ರತಾ ಪಡೆಯವರು ಗುಂಡಿನ ಚಕಮಕಿ ವೇಳೆ ನಾಗರಿಕರನ್ನು ಗುಂಡಿನಿಂದ ಬಚಾವು ಮಾಡಬೇಕು, ಅವರನ್ನೇ ಸಾಯಲು ಗುಂಡಿಗೆ ದೂಡುವುದಲ್ಲ” ಎಂದು ಎಚ್ ಆರ್ ಡಬ್ಲ್ಯು ದಕ್ಷಿಣ ಏಶಿಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.


“ಈ ಘಟನೆ ಬಗ್ಗೆ ಸಂಬಂಧಿಸಿದವರು ಕೂಡಲೆ ಪಾರದರ್ಶಕ, ನಂಬಿಕಾರ್ಹ, ಸ್ವತಂತ್ರ ತನಿಖೆ ನಡೆಸಬೇಕು” ಎಂದು ಮೀನಾಕ್ಷಿ ಒತ್ತಾಯಿಸಿದ್ದಾರೆ. ನಾಲ್ವರು ಸಾವಿಗೀಡಾದ ಶೂಟ್ ಔಟ್ ಪ್ರಕರಣದಲ್ಲಿ ಮೂವರು ಸಣ್ಣ ಮಕ್ಕಳ ತಂದೆ ವ್ಯಾಪಾರಿ ಅಲ್ತಾಫ್ ಅಹಮದ್ ಭಟ್ ಅವರನ್ನು ಭದ್ರತಾ ಪಡೆಯವರು ಮಾನವ ಗುರಾಣಿ ಮಾಡಿಕೊಂಡು ಸಾವಿಗೆ ದೂಡಿರುವರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

- Advertisement -


ಜಿನೇವಾ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಭಾರತವೂ ಒಂದು. ಸಂಘರ್ಷಗಳ ಕಾಲದಲ್ಲಿ ನಾಗರಿಕರನ್ನಾಗಲೀ, ಸೆರೆಯಾಳನ್ನಾಗಲಿ ಮಾನವ ಗುರಾಣಿಯಾಗಿ ಉಪಯೋಗಿಸಿಕೊಳ್ಳಬಾರದು ಎಂಬುದು ಒಪ್ಪಂದಗಳಲ್ಲಿ ಪ್ರಮುಖ ಅಂಶ. ಯಾರೇ ಆದರೂ, ಸಂಘರ್ಷದ ವೇಳೆ ಯಾವ ಕಡೆಯವರೇ ಆದರೂ ತಮ್ಮ ಜೀವಕ್ಕೆ ಕುತ್ತು ಬರುವಾಗಲೂ ನಾಗರಿಕರನ್ನು ಮಾನವ ಗುರಾಣಿಯಾಗಿ, ಸೇನಾ ಪರಿಕರವಾಗಿ ಬಳಸುವಂತಿಲ್ಲ.


ಫ್ರಾನ್ಸಿನ ಲಾಭರಹಿತ ಸಂಸ್ಥೆ ಎಂಎಸ್ ಎಫ್- ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಇವರು ಕಾಶ್ಮೀರ ಸಹಿತ ಹಲವು ಸಂಘರ್ಷ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವವರಾಗಿದ್ದಾರೆ. ಮಿಲಿಟರಿಯವರು ನಾಗರಿಕರನ್ನು ಮಾನವ ಗುರಾಣಿ ಆಗಿಸಿಕೊಳ್ಳುವುದು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳಿಗೆ ವಿರುದ್ಧವಾದುದು ಎಂದು ಅವರು ಈ ಘಟನೆ ಸಂಬಂಧ ಹೇಳಿದ್ದಾರೆ.
“ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಪ್ರಕಾರ ಅಂಥ ಘಟನೆಯು ಯುದ್ಧಾಪರಾಧವಾಗುತ್ತದೆ. ಮಾನವೀಯ ಕಾನೂನುಗಳು ನಾಗರಿಕರನ್ನು ನಾನಾ ನಿಟ್ಟಿನಲ್ಲಿ ರಕ್ಷಿಸಿವೆ. ಪೌರರು, ಗಾಯಾಳುಗಳು, ರೋಗಿಗಳು, ಯುದ್ಧ ಕೈದಿಗಳು, ವೈದ್ಯಕೀಯ ಸಿಬ್ಬಂದಿಯನ್ನು ಈ ಕಾಯ್ದೆಯಡಿ ರಕ್ಷಿಸಲಾಗಿದೆ” ಎಂದು ಎಂಎಸ್ ಎಫ್ ನೆನಪಿಸಿದೆ.


ಪ್ರತ್ಯಕ್ಷದರ್ಶಿಗಳ ಹೇಳಿಕೆ
ಪ್ರತ್ಯಕ್ಷದರ್ಶಿಗಳು ಮತ್ತು ಅಲ್ತಾಫ್ ಅವರ ಕುಟುಂಬದ ಸದಸ್ಯರು ಈ ಬಗ್ಗೆ ಹೇಳುವುದಿಷ್ಟು; ಭದ್ರತಾ ಪಡೆ ಮತ್ತು ಜಮ್ಮು ಕಾಶ್ಮೀರದ ಪೊಲೀಸರ ತಂಡವು ಅಲ್ತಾಫ್ ರ ಶಾಪಿಂಗ್ ಕಾಂಪ್ಲೆಕ್ಸ್ ಗೆ ಬಂದು ಶೂಟ್ ಔಟ್ ನಡುವೆಯೇ ಅವರನ್ನು ಕರೆದುಕೊಂಡು ಹೋಗಿ ಉಗ್ರ ವಿರೋಧಿ ಕಾರ್ಯಾಚರಣೆ ಆರಂಭಿಸಿತು.
ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಹೇಳಿಕೆಯು ಸಹ ಭದ್ರತಾ ಪಡೆಯವರು ಅಲ್ತಾಫ್ ರನ್ನು ಕರೆದುಕೊಂಡು ಹೊರಟರು. ಉಗ್ರ ವಿರೋಧಿ ಕಾರ್ಯಾಚರಣೆಯು ಸೇನೆಯ 2ನೇ ರಾಷ್ಟ್ರೀಯ ರೈಫಲ್ಸ್, ಸಿಆರ್ ಪಿಎಫ್ ಮತ್ತು ಪೊಲೀಸ್ ದಳದೊಡನೆ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ನಡೆಯಿತು.
“ಆ ಕಟ್ಟಡದೊಳಗೆ ಉಗ್ರರು ಇರುವುದು ಭದ್ರತಾ ಪಡೆಯವರಿಗೆ ತಿಳಿದಿದ್ದರೆ, ನನ್ನ ಸಹೋದರನನ್ನು ಅವರು ಕರೆದೊಯ್ದದ್ದು ಏಕೆ? ಅವರು ಬೇಕೆಂದೇ ಆತನನ್ನು ತೊಂದರೆಗೆ ದೂಡಿದರು. ಆತನನ್ನು ಮಾನವ ಗುರಾಣಿಯಾಗಿ ಬಳಸಲಾಯಿತು. ಆತ ಯಾವ ರೀತಿಯಿಂದಲೂ ಉಗ್ರರೊಂದಿಗೆ ಸಂಬಂಧ ಹೊಂದಿರಲಿಲ್ಲ” ಎಂದು ಅಲ್ತಾಫ್ ರ ಸಹೋದರ ಅಬ್ದುಲ್ ಮಜೀದ್ ಭಟ್ ಹೇಳುತ್ತಾರೆ.
ಸೋಮವಾರ ಸಂಜೆ 5.30 ಗಂಟೆಗೆ ನಡೆದ ಈ ಕಾರ್ಯಾಚರಣೆಯನ್ನು ಸಮೀಪದಿಂದ ನೋಡಿದವರು ಕೂಡ ಮಜೀದ್ ಹೇಳಿಕೆಯನ್ನು ಸಮರ್ಥಿಸುತ್ತಾರೆ.


ಇಬ್ಬರು ಹೆಸರು ಹೇಳಲಿಚ್ಛಿಸದ ಪ್ರತ್ಯಕ್ಷದರ್ಶಿಗಳು ಹೇಳಿದ್ದು ಹೀಗೆ; ಶೋಧ ತಂಡಗಳು ಆ ಪ್ರದೇಶಕ್ಕೆ ಬಂದವು. ಅದಕ್ಕೆ ಮೊದಲೇ ಆ ಪ್ರದೇಶದಲ್ಲಿ ನಾಗರಿಕರಂತೆ ಭದ್ರತಾ ಪಡೆಯ ಹಲವರು ನಿಲ್ಲಿಸಲ್ಪಟ್ಟಿದ್ದರು. “ಅವರು ವ್ಯಾಪಾರಿಗಳನ್ನು ಶಟರ್ ಎಳೆದು ಅಂಗಡಿ ಮುಚ್ಚುವಂತೆ ಹೇಳಿದರು ಮತ್ತು ಆ ಕಾಂಪ್ಲೆಕ್ ಅನ್ನು ಸುತ್ತುವರಿದರು.” ಒಬ್ಬ ಪ್ರತ್ಯಕ್ಷದರ್ಶಿ ಹೇಳಿದರು.


ವ್ಯಾಪಾರಿಗಳನ್ನು ಶಾಪಿಂಗ್ ಕಾಂಪ್ಲೆಕ್ಸಿನ ದ್ವಿಚಕ್ರ ವಾಹನಗಳ ಅಂಗಡಿಯಲ್ಲಿ ಸೇರಿಸಿದ ಭದ್ರತಾ ಪಡೆಯವರು ಅವರೆಲ್ಲರ ಮೊಬೈಲ್ ಗಳನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರು ಬೇಲಿ ಬಲಗೊಳ್ಳತ್ತ ಹುಡುಕು ತಂಡವು ಸಮುಚ್ಚಯದೊಳಕ್ಕೆ ನುಗ್ಗುವ ಪ್ರಯತ್ನ ಮಾಡಿತು.
“ಅಲ್ತಾಫ್ ತನ್ನ ಅಂಗಡಿ ಮುಚ್ಚುತ್ತಿದ್ದರು, ಆಗ ಸೈನಿಕರು ಬಂದು ಜೊತೆಗೆ ಬರುವಂತೆ ಹೇಳಿ ಕರೆದುಕೊಂಡು ಹೋದರು. ಆತನೇನೂ ಪ್ರತಿರೋಧ ತೋರದೆ ಹಿಂಬಾಲಿಸಿದ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಭದ್ರತಾ ಪಡೆಗಳು ತನ್ನ ಮೇಲೆ ಕಣ್ಣಿಡುತ್ತವೆ ಎಂದು ಹೆದರಿ ಆತ ಹೆಸರು ಹೇಳಲು ನಿರಾಕರಿಸಿದ್ದಾನೆ.
ಕೊಲ್ಲಲ್ಪಟ್ಟ ಇನ್ನೊಬ್ಬ ಮುದಾಸಿರ್ ಮತ್ತು ಅಲ್ತಾಫ್ ಭದ್ರತಾ ಪಡೆಯವರೊಂದಿಗೆ ಹೊರಗೆ ನಡೆದರು. “ಅಲ್ತಾಫ್ ಮತ್ತು ಮುದಾಸಿರ್ ಅವರನ್ನು ಶೋರೂಮಿನ ಹೊರಗೆ ನೆರವಿಗೆ ನಿಲ್ಲುವಂತೆ ಹೇಳಲಾಯಿತು. 30 ನಿಮಿಷಗಳ ಬಳಿಕ ಅವರನ್ನು ಮತ್ತೆ ಕಾಂಪ್ಲೆಕ್ಸಿನ ಒಳಗೆ ಕರೆದೊಯ್ಯಲಾಯಿತು. ಗುಂಡಿನ ಚಕಮಕಿ ಆರಂಭವಾಯಿತು. ಇದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿ ಇದೆ” ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು.


ಕಾಶ್ಮೀರದ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ವಿಜಯ ಕುಮಾರ್ ಅವರ ಪ್ರಕಾರ, ಅಲ್ತಾಫ್ ಮತ್ತು ಮುದಾಸಿರ್ ಒಳಗೆ ಹೋದವರು ಮೇಲಿನ ಮಹಡಿಯ, ಉಗ್ರರು ಅಡಗಿರುವರು ಎನ್ನಲಾದ ಕೋಣೆಯ ಬಾಗಿಲು ಬಡಿದರು. ಪ್ರಮಾಣಿತ ಕಾರ್ಯಾಚರಣೆಯ ಕ್ರಮವೊಂದರ ನಿಯಮ ಮುರಿದಿರುವುದು ಇದರಲ್ಲಿ ಸ್ಪಷ್ಟವಿದೆ. ಈ ಬಗ್ಗೆ ಐಜಿಯವರ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ ಎನ್ನುತ್ತಾರೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, ಶಂಕಿತ ಭಯೋತ್ಪಾದಕರು ಸೇಡು ತೀರಿಸಿಕೊಳ್ಳುವವರಂತೆ ಯದ್ವಾತದ್ವ ಗುಂಡು ಹಾರಿಸತೊಡಗಿದರು. ಆರಂಭದ ಗುಂಡಿನ ಚಕಮಕಿಯಲ್ಲೇ ಅಲ್ತಾಫ್ ಮತ್ತು ಮುದಾಸಿರ್ ಅವರು ಗುಂಡೇಟಿಗೆ ಸಿಕ್ಕು ಪ್ರಾಣಕಳೆದುಕೊಂಡರು ಎಂದು ತಿಳಿಸಿದ್ದಾರೆ.


ಕಾನೂನು ಬಾಹಿರ’ ಎಂದ ವಕೀಲರು
ಗುಂಡಿನ ಚಕಮಕಿ ನಡೆಯುವಾಗ ಭದ್ರತಾ ಪಡೆಯವರು ಅಲ್ತಾಫ್ ಮತ್ತು ಮುದಾಸಿರ್ ಅವರನ್ನು ಆ ಶೂಟ್ ಔಟಿನ ಒಳಕ್ಕೆ ಕರೆದುಕೊಂಡು ಹೋಗಿರುವುದು ಕಾನೂನು ಬಾಹಿರ ಎನ್ನುತ್ತಾರೆ ದಕ್ಷಿಣ ಕಾಶ್ಮೀರದವರಾದ ಮಾನವ ಹಕ್ಕುಗಳ ವಕೀಲ ಹಬೀಬ್ ಇಕ್ಬಾಲ್.
“ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳಬಾರದು. ನಾಗರಿಕರು ಅವರಾಗಿಯೇ ಇಲ್ಲವೇ ಒತ್ತಾಯದಿಂದ ಮಾನವ ಗುರಾಣಿಯಾಗಿ ಬಳಸಲ್ಪಡುವುದು ಅಪರಾಧವಾಗಿದೆ. ಸಾಮಾನ್ಯ ಕಾನೂನುಗಳು ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳು ಎಲ್ಲವೂ ಇವನ್ನು ಒಪ್ಪುವುದಿಲ್ಲ” ಹಬೀಬ್ ಹೇಳುತ್ತಾರೆ.


ಈ ಶೂಟ್ ಔಟ್ ನಲ್ಲಿ ಪಾಕಿಸ್ತಾನದ ಉಗ್ರ ಮತ್ತು ಆತನ ಸ್ಥಳೀಯ ಬಂಟ ಆಮೀರ್ ಲತೀಫ್ ಮಾರ್ಗೆ ಕೊಲ್ಲಲ್ಪಟ್ಟರು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಏನೆಂದರೆ ಆಮಿರ್ ರಂಬಾನ್ ಗೂಲ್ ಪ್ರದೇಶದವನಾಗಿದ್ದು, ಡಾ. ಮುದಾಸಿರ್ ಅವರಿಗೆ ಸಹಾಯಕನಾಗಿ ಅಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಶೋಧ ಕಾರ್ಯಾಚರಣೆ ಆರಂಭವಾಗುತ್ತಲೇ ಡಾ. ಮುದಾಸಿರ್ ಕಾಂಪ್ಲೆಕ್ಸ್ ನಿಂದ ಹೊರಟು ನಿಂತಿದ್ದರು.
“ಅವರನ್ನು ಪೊಲೀಸರು ಶೋಧಿಸಿದರು. ಫೋನ್ ಕೇಳಿದಾಗ ಅವರು ನಾನು ಮೊಬೈಲ್ ಬಳಸುವುದಿಲ್ಲ ಎಂದು ಹೇಳಿ ಹೊರಟು ಹೋಗುವವರಿದ್ದರು.” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ವ್ಯಾಪಾರಿಗಳನ್ನು ಉಗ್ರರಿರುವ ಕೋಣೆಯೆಂದು ತೋರಿಸಿ ಆ ಕೋಣೆಯ ಬಾಗಿಲು ಬಡಿಯುವಂತೆ ಹೇಳಲಾಗಿದೆ. ಆದರೆ ಅಲ್ಲಿ, ಉಗ್ರರು ಇರಲಿಲ್ಲ ಎನ್ನುತ್ತಾರೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ.


“ಅವರು ಇಬ್ಬರು ನಾಗರಿಕರನ್ನು ಸಾವಿನ ದವಡೆಗೆ ದೂಡಿದರು” ಎಂದು ಉಮರ್ ಟ್ವೀಟ್ ಮಾಡಿದ್ದಾರೆ.
“ಅವರನ್ನು ಖಳರೆಂದೂ, ಉಗ್ರರೆಂದೂ ಇಲ್ಲವೇ ಉಗ್ರರ ಬಂಟರಾಗಿ ದುಡಿಯುವವರು ಎಂದು ಹೇಳಿದ್ದೇ ತಪ್ಪು, ಇನ್ನು ಅವರ ಶವಗಳನ್ನು ಬಲಾತ್ಕಾರವಾಗಿ ಕೊಂಡೊಯ್ದು ಉತ್ತರ ಕಾಶ್ಮೀರದಲ್ಲಿ ಹೂತು ಹಾಕಿದ್ದು ದೊಡ್ಡ ಅಪರಾಧ ಕೃತ್ಯ” ಎಂದು ಉಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ.


ಮಾನವೀಯತೆಯ ದೃಷ್ಟಿಯಿಂದ ಮೃತ ದೇಹಗಳನ್ನು ಕೂಡಲೆ ಕುಟುಂಬದವರಿಗೆ ಹಿಂದಿರುಗಿಸಬೇಕು. ಇದು ಮಾತ್ರ ಅನ್ಯಾಯಕ್ಕೆ ಒಂದು ಪುಟ್ಟ ಪರಿಹಾರವಾದೀತು ಎಂದು ಅವರು ಹೇಳಿದರು.
ಅಲ್ತಾಫ್ ಮತ್ತು ಮುದಾಸಿರ್ ಅವರ ಕುಟುಂಬಗಳು ಶ್ರೀನಗರದ ಪ್ರೆಸ್ ಎನ್ಕ್ಲೇವ್ ಎದುರು ಬುಧವಾರ ಪ್ರತಿಭಟನೆ ನಡೆಸಿವೆ. ಕೂಡಲೆ ಮೃತದೇಹವನ್ನು ನಮಗೊಪ್ಪಿಸಬೇಕು, ನಾವು ಅವರ ಕೊನೆಯ ಕ್ರಿಯಾ ಕರ್ಮಗಳನ್ನು ನಡೆಸಬೇಕಾಗಿದೆ ಎಂಬುದು ಅವರ ಒತ್ತಾಯವಾಗಿತ್ತು. ಕೊರೆಯುವ ಚಳಿಯಲ್ಲೂ ಮುದಾಸಿರ್ ಅವರ ಹೆಂಡತಿ ಮತ್ತು ಒಂದು ವರುಷದ ಮಗಳು ಇಡೀ ರಾತ್ರಿ ಪ್ರತಿಭಟನೆ ನಡೆಸಿದರು.


“ನಮಗೆ ಇನ್ನು ನ್ಯಾಯ ಬೇಕಾಗಿಲ್ಲ, ನಮ್ಮ ಸಹೋದರನ ದೇಹ (ಶವ) ಮಾತ್ರ ನಮಗೆ ಬೇಕು. ನಾವು ಆತನ ಮುಖ ನೋಡಿ ಮನಸ್ಸು ತುಂಬಿಕೊಳ್ಳಬೇಕು. ಆತನಿಗೆ ಗೌರವಯುತವಾದ ಶವ ಸಂಸ್ಕಾರವನ್ನು ನಾವು ನಿರ್ವಹಿಸಬೇಕಾಗಿದೆ. ಆತನ ಮನೆಯ ಪಕ್ಕವೆ ಆತನ ಗೋರಿ ನಿರ್ಮಿಸಬೇಕಾದದ್ದು ನಮ್ಮ ಕರ್ತವ್ಯ. ಸದಾ ಆತನಿಗಾಗಿ ಪ್ರಾರ್ಥಿಸಲೂ ಇದರಿಂದ ಸಾಧ್ಯವಾಗುತ್ತದೆ” ಎಂದು ಅಲ್ತಾಫ್ ರ ಸಹೋದರ ಮಜೀದ್ ಹೇಳುತ್ತಾರೆ. ಒಟ್ಟಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಮಾನವ ಗುರಾಣಿಯಾಗಿಸುವ ಕೃತ್ಯಗಳು ಮುಂದುವರಿಯುತ್ತಲೇ ಇವೆ ಎಂಬುದನ್ನು ಹೈದರ್ ಪೊರ ಎನ್ ಕೌಂಟರ್ ಮತ್ತೊಮ್ಮೆ ಸಾಬೀತುಪಡಿಸಿದೆ.



Join Whatsapp