ದಾವಣಗೆರೆ: ವಿದೇಶಿ ಮೂಲದ ಕೆ.ಎಫ್.ಸಿ. ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಹಾಡು, ಫಲಕ ಅಳವಡಿಸಲು ಒಂದು ವಾರದ ಗಡುವು ನೀಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುವ ಕೆ.ಎಫ್.ಸಿ. ಮಳಿಗೆಗಳಲ್ಲಿ ಕನ್ನಡ ಹಾಡು, ನಾಮಫಲಕ ಅಳವಡಿಸಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ದಾವಣೆಗೆರೆ ಮಳಿಗೆಗಳ ಮುಂಭಾಗದಲ್ಲಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಮ್.ಎಸ್. ರಾಮೇಗೌಡ, ಕನ್ನಡ ಅಳವಡಿಕೆಗೆ ಒಂದು ವಾರದೊಳಗೆ ಗಡುವು ನೀಡುವುದಾಗಿ ಘೋಷಿಸಿದರು. ಮಾತ್ರವಲ್ಲ ನಾಮಫಲಕ ಅಳವಡಿಕೆ, ಕನ್ನಡದಲ್ಲೇ ವ್ಯವಹಾರ ಮತ್ತು ಕನ್ನಡ ಹಾಡುಗಳನ್ನೇ ಹಾಕಬೇಕೆಂದು ಅವರು ಒತ್ತಾಯಿಸಿದರು. ಇದನ್ನು ಮೀರಿ ಕೆ.ಎಫ್.ಸಿ. ದುರಹಂಕಾರ ಮುಂದುವರಿಸಿದರೆ ಕರ್ನಾಟಕದ ಎಲ್ಲಾ ಮಳಿಗೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಈ ವೇಳೆ ಆಗುವ ಅನಾಹುತಕ್ಕೆ ಮಳಿಗೆಯೇ ಹೊಣೆಯಾಗುತ್ತದೆ ಎಂದು ಅವರು ಪುನರುಚ್ಚರಿಸಿದರು.
ಕರ್ನಾಟಕದಲ್ಲಿ ಇತರ ಭಾಷೆಯನ್ನು ಕನ್ನಡಿಗಗರ ಮೇಲೆ ಹೇರುವ ಹುಚ್ಚುತನವನ್ನು ಕರವೇ ಸಹಿಸುವುದಿಲ್ಲ ಎಂದು ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.