ಬರೋಬ್ಬರಿ 515 ರನ್: ಏಕದಿನ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣ

Prasthutha|

ಟೊರೊಂಟೊ: ಏಕದಿನ ಕ್ರಿಕೆಟ್​ನಲ್ಲಿ ಬರೋಬ್ಬರಿ 515 ರನ್​ ಬಾರಿಸಿ ಯುಎಸ್​ಎ ಅಂಡರ್ 19 ತಂಡ ಹೊಸ ಇತಿಹಾಸ ನಿರ್ಮಿಸಿದೆ. ಟೊರೊಂಟೊ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಅಮೆರಿಕಾಸ್ ಕ್ವಾಲಿಫೈಯರ್‌ ಪಂದ್ಯದಲ್ಲಿ ಈ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ಪಂದ್ಯದಲ್ಲಿ ಯುಎಸ್​ಎ U-19 ಹಾಗೂ ಅರ್ಜೆಂಟೀನಾ U-19 ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಅರ್ಜೆಂಟೀನಾ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು.

- Advertisement -

ಇತ್ತ ಇನಿಂಗ್ಸ್ ಆರಂಭಿಸಿದ ಪ್ರಣವ್ ಚೆಟ್ಟಿಪಾಳ್ಯಂ ಹಾಗೂ ಭವ್ಯ ಮೆಹ್ತಾ ಯುಎಸ್​ಎ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. 43 ಎಸೆತಗಳನ್ನು ಎದುರಿಸಿದ ಪ್ರಣವ್ 10 ಫೋರ್​ಗಳೊಂದಿಗೆ 61 ರನ್​ಗಳಿಸಿ ಔಟಾದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದ ಭವ್ಯ ಮೆಹ್ತಾ 91 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 136 ರನ್​ ಬಾರಿಸಿ ರನೌಟ್ ಆದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಿ ರಮೇಶ್ ಕೇವಲ 59 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್​ಗಳೊಂದಿಗೆ ಸ್ಪೋಟಕ ಶತಕ ಸಿಡಿಸಿದರು. ಹಾಗೆಯೇ ಅರ್ಜುನ್ ಮಹೇಶ್ 67 ರನ್​ಗಳ ಕೊಡುಗೆ ನೀಡಿದರೆ, ಅಮೋಘ್ ಅರೆಪಲ್ಲಿ 48 ರನ್​ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಉತ್ಕರ್ಷ್ ಶ್ರೀವಾಸ್ತವ 22 ಎಸೆತಗಳಲ್ಲಿ 40 ರನ್​ ಚಚ್ಚಿದರು. ಈ ಮೂಲಕ ಯುಎಸ್​ಎ ಅಂಡರ್-19 ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 515 ರನ್​ ಕಲೆಹಾಕಿತು.

- Advertisement -

516 ರನ್​ಗಳ ಕಠಿಣ ಗುರಿ ಪಡೆದ ಅರ್ಜೆಂಟೀನಾ ಪರ ಥಿಯೋ ವ್ರೂಗ್ಡೆನ್ಹಿಲ್ 18 ರನ್​ ಬಾರಿಸಿದರೆ, ಫೆಲಿಪೆ ನೆವೆಸ್ 15 ರನ್​ ಕಲೆಹಾಕಿದರು. ಇತ್ತ ಯುಎಸ್​ಎ ಪರ ಕರಾರುವಾಕ್ ದಾಳಿ ಸಂಘಟಿಸಿದ ಆರಿನ್ ನಾಡಕರ್ಣಿ 6 ಓವರ್​ಗಳಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಉರುಳಿಸಿದರು.

ಪರಿಣಾಮ ಅರ್ಜೆಂಟೀನಾ ಅಂಡರ್​-19 ತಂಡ 19.5 ಓವರ್​ಗಳಲ್ಲಿ ಕೇವಲ 65 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಯುಎಸ್​ಎ ಅಂಡರ್-19 ತಂಡ 450 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ವಿಶ್ವ ದಾಖಲೆ ಬರೆದ ಅಮೆರಿಕದ ಯುವ ಕ್ರಿಕೆಟಿಗರು:

ಈ ಪಂದ್ಯದಲ್ಲಿ 515 ರನ್​ ಬಾರಿಸುವ ಮೂಲಕ ಯುಎಸ್​ಎ ಅಂಡರ್-19 ತಂಡ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.

ಇದಕ್ಕೂ ಮುನ್ನ ಏಕದಿನ ಕ್ರಿಕೆಟ್​ನಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ 498 ರನ್​ಗಳು. 2022 ರಲ್ಲಿ ನೆದರ್​ಲೆಂಡ್ಸ್​ ವಿರುದ್ಧ ಇಂಗ್ಲೆಂಡ್ ತಂಡ ಈ ವಿಶ್ವ ದಾಖಲೆ ಬರೆದಿದ್ದರು. ಇದೀಗ ಯುಎಸ್​ಎ ಕಿರಿಯರ ತಂಡ 515 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ.

Join Whatsapp