ಚೊಚ್ಚಲ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಗೆದ್ದ ಇಗಾ ಸ್ವಟೆಕ್‌

Prasthutha|

ನ್ಯೂಯಾರ್ಕ್‌: ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ, ಪೋಲಂಡ್‌ನ ಇಗಾ ಸ್ವಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

- Advertisement -

ಅರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಇಗಾ ಸ್ವಟೆಕ್‌, ಟ್ಯುನಿಷಿಯಾದ ಆನ್ಸ್‌ ಜಬೇರ್‌ ವಿರುದ್ಧ 6-2, 7-6 (7/5)ರ ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಭ‌ರ್ಜರಿ ಗೆಲುವು ದಾಖಲಿಸಿದರು. ಈ ಪಂದ್ಯವು ಒಂದು ಗಂಟೆ 52 ನಿಮಿಷಗಳಲ್ಲಿ ಮುಕ್ತಾಯಕಂಡಿತು.

21 ವರ್ಷದ ಸ್ವಟೆಕ್‌ ಅವರ ವೃತ್ತಿ ಜೀವನದ ಮೂರನೇ ಗ್ರ್ಯಾನ್‌ ಸ್ಲಾಮ್‌ ಮತ್ತು ಚೊಚ್ಚಲ ಯುಎಸ್‌ ಓಪನ್‌ ಕಿರೀಟ ಇದಾಗಿದೆ. 2020 ಮತ್ತು 2022ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದರು. ಸ್ವಟೆಕ್‌, ಪ್ರಸಕ್ತ ವರ್ಷ ಗೆಲ್ಲುತ್ತಿರುವ ಎರಡನೇ ಗ್ರ್ಯಾನ್‌ ಸ್ಲಾಮ್‌ ಹಾಗೂ ಒಟ್ಟಾರೆಯಾಗಿ 7ನೇ ಪ್ರಶಸ್ತಿ ಇದಾಗಿದೆ. 2019ರ ಬಳಿಕ ಒಟ್ಟು 10 ಫೈನಲ್‌ಗಳಲ್ಲಿ ಕಾಣಿಸಿಕೊಂಡಿರುವ ಸ್ವಟೆಕ್‌, ಅಜೇಯಳಾಗಿ ಮುಂದುವರಿದಿದ್ದಾರೆ. ಈ ನಡುವೆ 37 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ.

- Advertisement -

ಮತ್ತೊಂದೆಡೆ  ಈ ಬಾರಿಯ ವಿಂಬಲ್ಡನ್ ಟೂರ್ನಿಯ ಫೈನಲ್‌ ಪ್ರವೇಶಿಸಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಆನ್ಸ್‌ ಜಬೇರ್‌, ಯುಎಸ್‌ ಓಪನ್‌ ಫೈನಲ್‌ನಲ್ಲೂ ಸೋಲು ಕಾಣುವ ಮೂಲಕ ತೀವ್ರ ನಿರಾಸೆ ಅನುಭವಿಸಿದರು.

ಕಾಸ್ಪೆರ್‌ ರುಡ್ vs ಕಾರ್ಲೊಸ್‌ ಅಲ್ಕರಾಜ್‌

ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಹಣಾಹಣಿಗೆ ಭಾನುವಾರ ರಾತ್ರಿ ನಡೆಯಲಿದೆ. ನಾರ್ವೆ ದೇಶದ ಕಾಸ್ಪೆರ್‌ ರುಡ್ ಮತ್ತು ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್‌ ಅಲ್ಕರಾಜ್‌ ಪರಸ್ಪರ ಎದುರಾಗಲಿದ್ದಾರೆ.

ಸೆಮಿಫೈನಲ್‌ ಪಂದ್ಯದಲ್ಲಿ ಐದನೇ ಶ್ರೇಯಾಂಕದ ರುಡ್, 27ನೇ ಶ್ರೇಯಾಂಕದ ರಷ್ಯಾದ ಖಚಾನೋವ್ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ್ದಾರೆ. ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಕಾರ್ಲೊಸ್‌ ಅಲ್ಕರಾಜ್‌, ಅಮೆರಿಕದ ಫ್ರಾನ್ಸಿಸ್ ಟಿಯಾಫೋರನ್ನು ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಹಿಂದಿಕ್ಕಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಕಾಸ್ಪೆರ್‌ ರುಡ್ ಮತ್ತು ಅಲ್ಕರಾಜ್‌ ಇದೇ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಮ್‌ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದ್ದಾರೆ.



Join Whatsapp