ವಾಷಿಂಗ್ಟನ್: ಆಗ್ನೇಯ ಅಮೆರಿಕದಲ್ಲಿ ವ್ಯಾಪಕ ನಾಶ-ನಷ್ಟಕ್ಕೆ ಕಾರಣವಾಗಿರುವ ಹೆಲೆನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 150ಕ್ಕೆ ಏರಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಕರೋಲಿನಾ, ದಕ್ಷಿಣ ಕರೋಲಿನಾ, ಜಾರ್ಜಿಯಾ, ಫ್ಲೋರಿಡಾ, ಟೆನ್ನೆಸಿ ಮತ್ತು ವರ್ಜೀನಿಯಾದಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು ಇಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಜಲಾವೃತಗೊಂಡಿರುವ ಕೆಲವು ಪ್ರದೇಶಗಳನ್ನು ತಲುಪಲು ಶೋಧ ಮತ್ತು ರಕ್ಷಣಾ ತಂಡ ಹೆಣಗುತ್ತಿದ್ದು 92 ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಹಲವೆಡೆ ಮರಗಳು ಉರುಳಿಬಿದ್ದು ರಸ್ತೆ ಸಂಚಾರ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ತಾತ್ಕಾಲಿಕ ಶಿಬಿರಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.