ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿಗಳ ಡಿಬಾರ್: ಪ್ರಾಂಶುಪಾಲರ ತಾರತಮ್ಯ ನೀತಿಗೆ ಎಸ್’ಎಫ್’ಐ ಕಿಡಿ

Prasthutha|

ಮಂಗಳೂರು: ಇತ್ತೀಚೆಗೆ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್’ನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯ ಹೆಸರಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದು ತಾರತಮ್ಯದ ಪರಮಾವಧಿ ಎಂದು ಎಸ್’ಎಫ್’ಐ ದ.ಕ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ವಿನೀತ್ ದೇವಾಡಿಗ, ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ ತೀವ್ರವಾಗಿ ಖಂಡಿಸಿದ್ದಾರೆ

- Advertisement -

 ಇತ್ತೀಚೆಗೆ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್’ನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಘರ್ಷಣೆಯು ಮತೀಯ ತಿರುವನ್ನು ಪಡೆದಿತ್ತು. ಈ ಬಗ್ಗೆ ಇತ್ತಂಡಗಳು ಪರಸ್ಪರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತಿ-ದೂರನ್ನು ನೀಡಿದ ಬಳಿಕ ಹೊಡೆದಾಟ ನಿರತ ವಿದ್ಯಾರ್ಥಿಗಳ ಹೆತ್ತವರನ್ನು ತರಿಸಿ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿತ್ತು. ಆದರೆ ಘಟನೆ ನಡೆದು ಕೆಲವು ದಿನಗಳ ನಂತರ ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಬ್ಬರನ್ನು ಮಾತ್ರ ಕಾಲೇಜಿನಿಂದ ಅಮಾನತುಗೊಳಿಸುವ ಮೂಲಕ ಪ್ರಾಂಶುಪಾಲರು ಮತೀಯ ತಾರತಮ್ಯ ಎಸಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷ ಮತೀಯ ರೂಪ ಪಡೆಯದಂತೆ ನೋಡಿಕೊಂಡು, ಶಿಕ್ಷಣ ಇಲಾಖೆಯ ನೀತಿ ನಿಯಮಗಳಿಗೆ ಅನುಸಾರವಾಗಿ ಸೂಕ್ತ ಕ್ರಮಕೈಗೊಳ್ಳುವ ಬದಲಾಗಿ ಬಿಜೆಪಿ ಬೆಂಬಲಿತರ ಮಾರ್ಗದರ್ಶನದ ಅನುಸಾರವಾಗಿ ಕೇವಲ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಮೇಲಷ್ಟೇ ಕ್ರಮಕೈಗೊಂಡು ಅವರನ್ನು ಟಿಸಿ ನೀಡಿ ಮನೆಗೆ ಕಳುಹಿಸಿರುವ ಪ್ರಾಂಶುಪಾಲರ ಕ್ರಮ ಶಿಕ್ಷಣ ಇಲಾಖೆಯ ನೀತಿಗಳಿಗೆ ವಿರುದ್ಧವಾಗಿದೆ. ಕಾಲೇಜು ವಿದ್ಯಾರ್ಥಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಂತಹ ಮೌಲ್ಯಗಳನ್ನು ಕಲಿಸಿಕೊಡಬೇಕಾಗಿದ್ದ ಪ್ರಾಂಶುಪಾಲರು, ಮತೀಯ ಧ್ರುವೀಕರಣ ನಡೆಸುವುದಾದರೆ ಅವರು ಪ್ರಾಂಶುಪಾಲ ಹುದ್ದೆಗೆ ಕಳಂಕವನ್ನು ತಂದೊಡ್ಡಿದ್ದಾರೆ ಎನ್ನಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

 ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲಿನ ಅಮಾನತು ಕ್ರಮವನ್ನು ರದ್ದುಗೊಳಿಸಿ ಮತ್ತೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಭಾರತ ವಿದ್ಯಾರ್ಥಿ ಫೆಡರೇಶನ್ SFI ಸಂಘಟನೆಯು ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳ ಪರವಾಗಿ ಹಾಗೂ ತಾರತಮ್ಯ ಎಸಗಿದ ಪ್ರಾಂಶುಪಾಲರ ವಿರುದ್ಧ ಹೋರಾಟವನ್ನು ನಡೆಸಲಿದೆ ಎಂದು ಎಸ್’ಎಫ್’ಐ ದ.ಕ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ವಿನೀತ್ ದೇವಾಡಿಗ, ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.



Join Whatsapp