ಪಾಕ್ ಧ್ವಜಾರೋಹಣ ಆರೋಪದಲ್ಲಿ ನಾಲ್ವರ ಮೇಲೆ ದೇಶದ್ರೋಹ ಪ್ರಕರಣ: ಅದು ಪಾಕ್ ಧ್ವಜ ಅಲ್ಲ ಎಂದು ಖಚಿತಪಡಿಸಿದ ಪೊಲೀಸರು

Prasthutha|

ಲಕ್ನೋ: ತಮ್ಮ ಮನೆಯ ಮೇಲೆ ಪಾಕಿಸ್ತಾನದ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಗೋರಖ್ ಪುರದ ಪೊಲೀಸರು ನಾಲ್ವರು ಮುಸ್ಲಿಮರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಇದೀಗ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯು, ಅಲ್ಲಿ ಕಂಡು ಬಂದಿದ್ದು ಪಾಕ್ ಧ್ವಜವಲ್ಲ, ಬದಲಾಗಿ ಧಾರ್ಮಿಕ ಧ್ವಜ ಎಂದು ತಿಳಿಸಿದ್ದಾರೆ.

- Advertisement -

ಮಾತ್ರವಲ್ಲ ಧ್ವಜಗಳ ಮೇಲೆ ಯಾವುದೇ ಆಕ್ಷೇಪಾರ್ಹ ಪದಗಳನ್ನು ಬರೆದಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು ಈ ಸಂಬಂಧ ಯಾರನ್ನೂ ಬಂಧಿಸಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂಬ ಫೋಟೊವೊಂದು ವೈರಲ್ ಆಗಿತ್ತು. ಈ ಸಂಬಂಧ ಸಂಘಪರಿವಾರದ ಕಾರ್ಯಕರ್ತರು ಆ ಮನೆಯ ನಿವಾಸದ ಹೊರಗೆ ಪ್ರತಿಭಟನೆ ನಡೆಸಿತ್ತು. ಇದಾದ ನಂತರ ನಾಲ್ವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಗಳಾದ ತಾಲೀಮ್, ಪಪ್ಪು, ಆಶಿಕ್ ಮತ್ತು ಆತನ ಸಹೋದರ ಆಸಿಫ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ನಾಲ್ವರು ಎರಡು ಕುಟುಂಬಗಳಿಗೆ ಸೇರಿದವರಾಗಿದ್ದು, ಗೋರಖ್ ಪುರದ ಚೌರಿ ಚೌರಾ ಎಂಬಲ್ಲಿನ ನಿವಾಸಿಗಳಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಆಕ್ರೋಶಿತ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆಯ ನೆಪದಲ್ಲಿ ದಾಂಧಲೆ ನಡೆಸಿ ಆರೋಪಿಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ, ಕಾರುಗಳಿಗೆ ಹಾನಿಗೈದಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

ಮುಸ್ಲಿಮರ ಧಾರ್ಮಿಕ ಹಬ್ಬದ ಪ್ರಯುಕ್ತ ಹಾಕಲಾಗಿದ್ದ ಧ್ವಜಗಳನ್ನು ತಪ್ಪಾಗಿ ಗ್ರಹಿಸಿದ ಸಂಘಪರಿವಾರದ ಕಾರ್ಯಕರ್ತರು ಈ ರೀತಿಯ ಗೊಂದಲಮಯ ವಾತಾವರಣ ನಿರ್ಮಿಸಿದ್ದರು ಎಂದು ಆರೋಪಿಗಳ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಬ್ರಾಹ್ಮಣ ಜನ ಕಲ್ಯಾಣ ಸಮಿತಿ ಅಧ್ಯಕ್ಷ ಕಲ್ಯಾಣ ಪಾಂಡೆ ನೀಡಿದ ದೂರಿನನ್ವಯ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.



Join Whatsapp