ನಕಲಿ RT – PCR ಸುಳ್ಳಾರೋಪ ಅಡಿಯಲ್ಲಿ ಯುಎಪಿಎ ಸಂತ್ರಸ್ತರ ಕುಟುಂಬ ಸದಸ್ಯರ ಬಂಧನ

Prasthutha|

ಲಕ್ನೋ: ನಕಲಿ ಕೋವಿಡ್ ಟೆಸ್ಟ್ ವರದಿ ಸಲ್ಲಿಕೆಯ ಸುಳ್ಳಾರೋಪದಲ್ಲಿ ಮಗು, ಮಹಿಳೆ ಸೇರಿದಂತೆ ನಾಲ್ವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

- Advertisement -

ಪ್ರಸಕ್ತ ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಯುಎಪಿಎ ಪ್ರಕರಣದಲ್ಲಿ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾದ ಅನ್ಷದ್ ಬದ್ರುದ್ದೀನ್ ಮತ್ತು ಫಿರೋಝ್ ಖಾನ್ ಅವರ ಭೇಟಿಗೆ ತೆರಳಿದ ಸಂದರ್ಭದಲ್ಲಿ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ.

ನಕಲಿ ಕೋವಿಡ್ ವರದಿ ಸಲ್ಲಿಸಿದ್ದಾರೆಂಬ ಸುಳ್ಳಾರೋಪದಲ್ಲಿ ಅನ್ಷದ್ ಬದ್ರುದ್ದೀನ್ ಪತ್ನಿ ಮುಹ್ಸಿನಾ, ತಾಯಿ ನಸೀಮಾ, ಏಳು ವರ್ಷದ ಮಗ ಆತೀಫ್ ಎಂಬವರ ಜೊತೆ ಫಿರೋಝ್ ಖಾನ್ ತಾಯಿ ಹಲೀಮಾ ಎಂಬವರನ್ನು ಬಂಧಿಸಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಕೇರಳ ಮೂಲದ ವಕೀಲ ಕೆ.ಸಿ ನಸೀರ್ , ಸೋಮವಾರದಿಂದ ಜೈಲಿನಲ್ಲಿರುವ ಈ ಕುಟುಂಬದ ಜೊತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲ ಇವರೊಂದಿಗೆ ಮಗು ಕೂಡ ಜೈಲಿನಲ್ಲಿದ್ದು, ಅನ್ಷದ್ ರ ತಾಯಿ ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೂ ಅವರಿಗೆ ವೈದ್ಯಕೀಯ ಸೇವೆ ಒದಗಿಸಿಕೊಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ಮಧ್ಯೆ ಫಿರೋಝ್ ಖಾನ್ ಪತ್ನಿ ಸೌಜತ್ ಮತ್ತು ನಾಲ್ವರು ಮಕ್ಕಳು, ಉತ್ತರಪ್ರದೇಶದ ಪೊಲೀಸರ ನಿರಂತರ ಕಿರುಕುಳದಿಂದಾಗಿ ಕೇರಳಕ್ಕೆ ವಾಪಸಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಿ.ಎಫ್.ಐ ಕೇರಳ ಘಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಎ. ರವೂಫ್, ರಾಜಕೀಯ ಪಿತೂರಿಯ ಭಾಗವಾಗಿ ಸುಳ್ಳಾರೋಪ ಹೊರಿಸಿ ಈ ಬಂಧನ ನಡೆದಿದೆ. ಕುಟುಂಬದ ಎಲ್ಲಾ ಸದಸ್ಯರು ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಆದರೆ ಪ್ರಭುತ್ವದ ಷಡ್ಯಂತ್ರದಿಂದಾಗಿ 3 ಮಂದಿಯ ಪ್ರಮಾಣಪತ್ರ ನಕಲಿಯಾಗಿದೆ ಎಂದು ಆರೋಪಿಸಿದರು.

ಸಂತ್ರಸ್ತದ ಕುಟುಂಬದ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್ 5 ಕ್ಕೆ ನಡೆಯಲಿದೆ.



Join Whatsapp