ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವ 172 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುವುದು. ಇಂದು ಪ್ರಧಾನಿಯೊಂದಿಗಿನ ಸಭೆಯ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾಗಲಿದೆ.
2022ರ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹೇಳಿದರು. ಬಿಜೆಪಿ ಯು72 ಗಂಟೆಗಳಲ್ಲಿ ಎಂಟು ಶಾಸಕರನ್ನು ಕಳೆದುಕೊಂಡಿದ್ದು ಅವರಲ್ಲಿ ಮೂವರು ಸಚಿವರಾಗಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ 403 ಸ್ಥಾನಗಳಿದ್ದು , 2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳೊಂದಿಗೆ ಹೆಚ್ಚಿನ ಬಹುಮತಗಳಿಸಿತ್ತು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 47 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಮಾತ್ರ ತನ್ನದಾಗಿಸಿಕೊಂಡಿತ್ತು.
ಇಂದು ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಪ್ರಧಾನಮಂತ್ರಿಯವರೊಂದಿಗಿನ ಸಭೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಯು ಪಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ವರ್ಚುವಲ್ ಮೋಡ್ ನಲ್ಲಿ ಭಾಗವಹಿಸಲಿದ್ದಾರೆ. ಇಂದಿನ ಸಭೆಯಲ್ಲಿ ಮೊದಲ ಪಟ್ಟಿಯ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಶಾಸಕರು ಪಕ್ಷ ತೊರೆದ ಹಿನ್ನೆಲೆಯಲ್ಲಿ ಹಿಂದುತ್ವ ಪ್ರಚಾರವನ್ನು ತೀವ್ರಗೊಳಿಸಲು ಬಿಜೆಪಿ ಮುಂದಾಗುತ್ತಿದೆ ಎಂದು ಅಂದಾಜಿಲಾಗಿದೆ.