ಪ್ರಯಾಗ್ ರಾಜ್ ಹಿಂಸಾಚಾರ: ವೆಲ್ಫೇರ್ ಪಾರ್ಟಿ ಮುಖಂಡ ಜಾವೇದ್ ಮುಹಮ್ಮದ್, ಕುಟುಂಬ ಬಂಧನ

Prasthutha|

ಶೀಘ್ರ ಬಿಡುಗಡೆಗೆ SDPI ಆಗ್ರಹ

- Advertisement -

ಲಖನೌ: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ನಮಾಝ್ ಬಳಿಕ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಗಲಭೆಯ ಸೂತ್ರದಾರ ಎಂಬ ಆರೋಪದಲ್ಲಿ ವೆಲ್ಫೇರ್ ಪಾರ್ಟ್ ಆಫ್ ಇಂಡಿಯಾದ ಮುಖಂಡ ಜಾವೇದ್ ಮುಹಮ್ಮದ್ ಮತ್ತು ಕುಟುಂಬವನ್ನು ಅಲಹಾಬಾದ್ ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ ಅಕ್ರಮವಾಗಿ ಬಂಧಿಸಲ್ಪಟ್ಟ ವೆಲ್ಫೇರ್ ಪಾರ್ಟಿ ಮುಖಂಡ ಜಾವೇದ್ ಮುಹಮ್ಮದ್ ಮತ್ತು ಕುಟುಂಬವನ್ನು ತಕ್ಷಣ ಬಿಡುಗಡೆಗೊಳಿಸುವಂತೆ SDPI ಆಗ್ರಹಿಸಿದೆ.

- Advertisement -

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ SDPI ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ. ಫೈಝಿ, ಪ್ರವಾದಿ ಅವಹೇಳನವನ್ನು ವಿರೋಧಿಸಿ ಪ್ರತಿಭಟಿಸಿದ ನೆಪದಲ್ಲಿ ವೆಲ್ಫೇರ್ ಪಾರ್ಟಿ ಮುಖಂಡ, ಫ್ರೆಟರ್ನಿಟಿ ಮೂವ್ ಮೆಂಟ್ ರಾಷ್ಟ್ರೀಯ ಕಾರ್ಯದರ್ಶಿ ಅಫ್ರೀನ್ ಫಾತಿಮಾ ಅವರ ತಂದೆಯಾದ ಜಾವೇದ್ ಮುಹಮ್ಮದ್ ಮತ್ತು ಕುಟುಂಬವನ್ನು ಅಲಹಾಬಾದ್ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಈ ನಿಟ್ಟಿನಲ್ಲಿ SDPI ಆ ಕುಟುಂಬದೊಂದಿಗೆ ನಿಲ್ಲಲಿದೆ. ಆದ್ದರಿಂದ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಮಧ್ಯೆ ಪ್ರವಾದಿ ಅವಹೇಳನವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ನೆಪದಲ್ಲಿ ಯಾವುದೇ ನೋಟಿಸ್ ನೀಡದೆ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ತಡರಾತ್ರಿ ಅಲಹಾಬಾದ್ ಪೊಲೀಸರು ಅಕ್ರಮವಾಗಿ ಬಂಧಿಸಿ ಕರೆದುಕೊಂಡು ಹೋಗಿರುವುದಾಗಿ ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಅಲ್ಲದೆ ಪ್ರಯಾಗ್ ರಾಜ್ ಗಲಭೆಗೆ ಸಂಬಂಧಿಸಿದಂತೆ AIMIM ಜಿಲ್ಲಾಧ್ಯಕ್ಷ ಶಾ ಆಲಂ, ಎಡರಂಗದ ನಾಯಕ ಆಶಿಶ್ ಮಿತ್ತಲ್ ಮತ್ತು ಸಿಎಎ ವಿರೋಧಿ ಕಾರ್ಯಕರ್ತ ಝೆಶನ್ ರೆಹಮ್ನಿ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.



Join Whatsapp