ಲಕ್ನೋ: ವ್ಯಕ್ತಿಯೊಬ್ಬನ ತಲೆ ಬೋಳಿಸಿ ಮರಕ್ಕೆ ಕಟ್ಟಿ ಹಾಕಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಥಳಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್‌ನಲ್ಲಿ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲ್ಲೆಗೊಳಗಾದ ಸಂತ್ರಸ್ತನನ್ನು ಬಂಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆ ನಡೆಸಿದ ಆರೋಪಿಗಳನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಗಜೇಂದ್ರ, ಸೌರಭ್ ಮತ್ತು ಧನ್ನಿ ಎಂದು ಗುರುತಿಸಲಾಗಿದೆ. ಇದರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಕಳ್ಳತನದ ಶಂಕೆಯಲ್ಲಿ ಮುಸ್ಲಿಮ್ ಕಾರ್ಮಿಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಅಲ್ಲದೇ ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸಂತ್ರಸ್ತನನ್ನು ಸಾಹಿಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಸಾಹಿಲ್‍ನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆತನ ತಂದೆ ಶಕೀಲ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಸಂಸದ ಅಸಾದುದ್ದೀನ್ ಓವೈಸಿ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸಾಹಿಲ್‍ನನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.