ಉ.ಪ್ರ ದಲ್ಲಿ ಮುಂದುವರಿದ ಕಸ್ಟಡಿ ಸಾವು: ಐವರು ಪೊಲೀಸರ ಅಮಾನತು

Prasthutha|

ಲಕ್ನೋ: ಉತ್ತರ ಪ್ರದೇಶದ ಇಟಾಕ್ ಜಿಲ್ಲೆಯಲ್ಲಿ 22 ವರ್ಷದ ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದು, ಈ ಸಂಬಂಧ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

- Advertisement -

ಈ ಮಧ್ಯೆ ಪೊಲೀಸರು ಯುವಕನ ಕಸ್ಟಡಿ ಸಾವನ್ನು, ಆತ್ಮಹತ್ಯೆ ಎಂದು ಬಿಂಬಿಸಿ ಕೈ ತೊಳೆದುಕೊಂಡಿದೆ ಎಂದು ಮೃತ ಯುವಕನ ಕುಟುಂಬ ಆರೋಪಿಸಿದೆ.

ಮಹಿಳೆಯೊಬ್ಬರ ಅಪಹರಣ ಮತ್ತು ಬಲವಂತದ ಮದುವೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆಗಾಗಿ ಅಲ್ತಾಫ್ ಎಂಬಾತನನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು.

- Advertisement -

ಘಟನೆಯ ಕುರಿತು ಟ್ವಿಟ್ಟರ್ ನಲ್ಲಿ ವೀಡಿಯೋ ಹೇಳಿಕೆಯನ್ನು ಬಿಡುಗಡೆಗೊಳಿಸಿದ ಇಟಾಕ್ ನ ಪೊಲೀಸ್ ಮುಖ್ಯಸ್ಥ ರೋಹನ್ ಪ್ರಮೋದ್ ಬೋತ್ರೆ ಅವರು ಶೌಚಾಲಯದಲ್ಲಿ ಅಲ್ತಾಫ್ ನೇಣು ಬಿಗಿದು ಆತ್ಮಹತ್ಯೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರ ಈ ಅರೋಪವನ್ನು ನಿರಾಕರಿಸಿರುವ ಅಲ್ತಾಫ್ ನ ಕುಟುಂಬ, ಯಾರದೋ ಒತ್ತಡಕ್ಕೆ ಮಣಿದು ಪೊಲೀಸರು ವ್ಯವಸ್ಥಿತವಾಗಿ ಕೊಲೆ ನಡೆಸಿದ್ದಾರೆ ಎಂದು ದೂರಿದೆ.

ಪೊಲೀಸರು ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಐವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಮೋದ್ ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಅಲ್ತಾಫ್ ನ ಕೊಲೆಯ ಕುರಿತು ನಿಷ್ಪಕ್ಷಪಾತ ಉನ್ನತ ತನಿಖೆ ನಡೆಸಬೇಕು ಎಂದು ಕುಟುಂಬದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



Join Whatsapp