ಲಖನೌ : ಆಡಳಿತಾರೂಢ ಬಿಜೆಪಿಯನ್ನು ಏನೇ ಆದರೂ, ಯಾವ ಹಂತಕ್ಕಾದರೂ ಇಳಿದು ಸಮರ್ಥಿಸಿಕೊಳ್ಳುವ ಮುಖ್ಯವಾಹಿನಿ ಮಾಧ್ಯಮಗಳ ಪತ್ರಕರ್ತರು ಒಂದು ಬಾರಿ ಈ ಘಟನೆಯ ಬಗ್ಗೆ ಸರಿಯಾಗಿ ನೋಡಬೇಕು. ಪ್ರಧಾನಿ ನರೇಂದ್ರ ಮೋದಿ ನಂತರ ಬಿಜೆಪಿಗರ ಎರಡನೇ ಅತಿದೊಡ್ಡ ಐಕಾನ್, ಸಿಎಂ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಪತ್ರಕರ್ತ ಮತ್ತು ಅವರ ಸ್ನೇಹಿತರೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಮನೆಯೊಳಗೆ ನುಗ್ಗಿ, ಬೆಂಕಿ ಹಚ್ಚಿ ಹತ್ಯೆ ಮಾಡಿದೆ.
ಲಖನೌ ಮೂಲದ ‘ರಾಷ್ಟ್ರೀಯ ಸ್ವರೂಪ’ ಪತ್ರಿಕೆಯ ಪತ್ರಕರ್ತ ರಾಕೇಶ್ ಸಿಂಗ್ ನಿರ್ಭಿಕ್ ಮತ್ತು ಅವರ ಸ್ನೇಹಿತ ಪಿಂಟು ಸಾಹು ಅವರನ್ನು ಸ್ಯಾನಿಟೈಸರ್ ಸುರಿದು, ಬೆಂಕಿ ಹಚ್ಚಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಬಲರಾಂಪುರದ ಗ್ರಾಮವೊಂದರ ಪತ್ರಕರ್ತ ರಾಕೇಶ್ ಮನೆಯಲ್ಲಿ ಈ ಘಟನೆ ನಡೆದಿದೆ. ಸಾಹು ಸ್ಥಳದಲ್ಲೇ ಸಾವಿಗೀಡಾಗಿದ್ದು, ರಾಕೇಶ್ ಸಿಂಗ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಕೆಲವು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯ ಗ್ರಾಮ ಪ್ರಧಾನ ಮತ್ತು ಅವರ ಮಗನ ವಿರುದ್ಧ ಪತ್ರಿಕೆಯಲ್ಲಿ ಬರೆದುದರ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ರಾಕೇಶ್ ಸಿಂಗ್ ಕೊನೆ ಗಳಿಗೆಯಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಗ್ರಾಮ ಪಂಚಾಯತ್ ಪ್ರಧಾನರ ಮಗ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮ ಪ್ರಧಾನರ ಮಗ ರಿಂಕು ಮಿಶ್ರಾ, ಕ್ರಿಮಿನಲ್ ಹಿನ್ನೆಲೆಯ ಅಕ್ರಮ್ ಮತ್ತು ಲಲಿತ್ ಮಿಶ್ರಾ ಎಂಬವರು ಬಂಧಿತರು ಎಂದು ಗುರುತಿಸಲಾಗಿದೆ.