ಮೊರಾದಾಬಾದ್ (ಉ.ಪ್ರ): ಅಂತರ್ ಧರ್ಮೀಯ ವಿವಾಹವಾದ ದಂಪತಿಯನ್ನು ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಸ್ಲಿಮ್ ವ್ಯಕ್ತಿಯ ವಿರುದ್ಧ ಮಹಿಳೆಯ ಅಪಹರಣ ಮತ್ತು ಮತಾಂತರ ವಿರೋಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಸೋಮವಾರ ಮೊರಾದಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಲು ಬಂದ ಅಂತರ್ ಧರ್ಮೀಯ ದಂಪತಿಯನ್ನು ಹಿಂದೂ ಯುವ ವಾಹಿನಿ ಕಾರ್ಯಕರ್ತರು ಬಲವಂತವಾಗಿ ತಡೆದು ನಿಲ್ಲಿಸಿ, ಮುಸ್ಲಿಮ್ ವ್ಯಕ್ತಿಗೆ ಹಲ್ಲೆ ನಡೆಸಿದ ಬಳಿಕ ಲವ್ ಜಿಹಾದ್ ಆರೋಪ ಹೊರಿಸಿ ಪೊಲೀಸರಿಗೊಪ್ಪಿಸಿದ್ದರು.
ಈ ಮಧ್ಯೆ ದಾಳಿಕೋರರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
ಮಹಿಳೆಯ ಅಪಹರಣ ಮತ್ತು ವಿವಾಹಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 363, 366, ಮತಾಂತರ ವಿರೋಧಿ ಕಾಯ್ದೆ 3-5 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಯುವತಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಜೈನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.