ಮುಝಫ್ಫರ್ ನಗರ ಗಲಭೆಯ 77 ಪ್ರಕರಣಗಳನ್ನು ಹಿಂಪಡೆದ ಆದಿತ್ಯನಾಥ್ ಸರ್ಕಾರ : ಸುಪ್ರೀಮ್ ಕೋರ್ಟ್ ಕಳವಳ

Prasthutha|

ನವದೆಹಲಿ: 2013 ರಲ್ಲಿ ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 77 ಪ್ರಕರಣವನ್ನು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ಹಿಂಪಡೆದಿದೆ. ಯಾವುದೇ ಮುನ್ಸೂಚನೆ ನೀಡದೆ ಜೀವಾವಧಿ ಶಿಕ್ಷೆ ಸೇರಿದಂತೆ ಹಲವು ಪ್ರಕರಣವನ್ನು ಹಿಂಪಡೆದಿರುವ ಕುರಿತು ಸುಪ್ರೀಮ್ ಕೋರ್ಟ್ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಾಮೂರ್ತಿ ಎನ್. ವಿ ರಮಣ, ನ್ಯಾಯಾಮೂರ್ತಿಗಳಾದ ಡಿ.ವೈ ಚಂದ್ರಚೂಡ ಮತ್ತು ಸೂರ್ಯಕಾಂತ್ ಅವರು ಶಾಸಕರ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಕೋರಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯನ್ನು ಆಲಿಸಿದ್ದಾರೆ.

- Advertisement -

2013 ರಲ್ಲಿ ನಡೆದ ಮುಝಫ್ಫರ್ ನಗರ ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೀರತ್ ವಲಯ ಸೇರಿದಂತೆ 5 ಜಿಲ್ಲೆಯಲ್ಲಿ 6869 ಆರೋಪಿಗಳ ವಿರುದ್ಧ ಒಟ್ಟು 510 ಪ್ರಕರಣವನ್ನು ದಾಖಲಿಸಿದೆಯೆಂದು ವಕೀಲರಾದ ಸ್ನೇಹಾ ಕಲಿಟಾ ಅವರು ತನ್ನ ಅರ್ಜಿಯಲ್ಲಿ ವರದಿ ಮಾಡಿದ್ದಾರೆ. ಈ 510 ಪ್ರಕರಣಗಳ ಪೈಕಿ 175 ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ 165 ಪ್ರಕರಣದಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ. 170 ಪ್ರಕರಣವನ್ನು ಕೈಬಿಡಲಾಗಿದೆ. ನಂತರ ಸಿ.ಆರ್.ಪಿ.ಸಿ ಸೆಕ್ಷನ್ 321 ರ ಅಡಿಯಲ್ಲಿ 77 ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಯಾವುದೇ ಮುನ್ಸೂಚನೆ ನೀಡದೆ 321 ರ ಅಡಿಯಲ್ಲಿ ಪ್ರಕರಣವನ್ನು ಸರ್ಕಾರ ಹಿಂಪಡೆಯುವುದು ಸಮಂಜಸವಲ್ಲವೆಂದು ವಕೀಲ ಹನ್ಸಾರಿಯ ವರದಿ ಸಲ್ಲಿಸಿದ್ದರು.

ಕಳೆದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಹಿಂಪಡೆದ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಬಿಜೆಪಿ ನಾಯಕರಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕಪಿಲ್ ದೇವ್ ಮತ್ತು ಬಲಪಂಥೀಯ ನಾಯಕಿ ಸಾದ್ವಿ ಪ್ರಾಚಿ ಒಳಗೊಂಡಿದ್ದಾರೆ. ಅದೇ ರೀತಿ ಕರ್ನಾಟಕ 62, ತಮಿಳ್ನಾಡು 4, ತೆಲಂಗಾಣ 14 ಮತ್ತು ಕೇರಳದಲ್ಲಿ 36 ಪ್ರಕರಣವನ್ನು ಯಾವುದೇ ಮುನ್ಸೂಚನೆ ನೀಡದೆ ಹಿಂಪಡೆದಿದೆ ಎಂದು ಅಮಿಕಸ್ ಕ್ಯೂರಿ ತಿಳಿಸಿದರು.

Join Whatsapp