ನವದೆಹಲಿ: ಅಲಹಾಬಾದ್ ಹೈಕೋರ್ಟ್ ನಲ್ಲಿ ಅಫಿದಾವತ್ ಸಲ್ಲಿಸಿದ ಉತ್ತರ ಪ್ರದೇಶದ ಸರ್ಕಾರ ಮತಾಂತರ ವಿರೋಧಿ ಕಾನೂನನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಮದುವೆಯನ್ನು ವ್ಯಕ್ತಿಯ ಧಾರ್ಮಿಕ ಇಚ್ಛೆಗೆ ವಿರುದ್ಧವಾಗಿ ಮತಾಂತರಗೊಳಿಸಲು ಒಂದು ಅಸ್ತ್ರವಾಗಿ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಕಾನೂನುಬಾಹಿರ ಮತಾಂತರವನ್ನು ತಡೆಗಟ್ಟುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆ 2021 ಜಾರಿಗೊಳಿಸಲು ಯೋಜನೆ ಹಾಕಿಕೊಂಡಿದೆ.
ನವೆಂಬರ್ 2020 ರಲ್ಲಿ ಪ್ರಸಕ್ತ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದ ನಂತರ ಈ ಫೆಬ್ರವರಿಯಲ್ಲಿ ಲವ್ ಜಿಹಾದ್ ಎಂದು ಕರೆಯುವ ಕಾನೂನನ್ನು ಅಂಗೀಕರಿಸಿದೆ. ಇದರನ್ವಯ ಆರೋಪಿಗೆ ಅಕ್ರಮ ವಿವಾಹ, ವಂಚನೆ, ಅತ್ಯಾಚಾರ ಅಥವಾ ಮತಾಂತರಕ್ಕೆ ಪ್ರಚೋದನೆಯ ಅಡಿಯಲ್ಲಿ 10 ವರ್ಷದ ಜೈಲುವಾಸ ಮತ್ತು 50 ಸಾವಿರ ದಂಡ ವಿಧಿಸಲಾಗುತ್ತದೆ.
ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯರ ನಡುವಿನ ಸಂಬಂಧವನ್ನು ಉಲ್ಲೇಖಿಸಲು ಬಲಪಂಥೀಯ ಗುಂಪು ಬಳಸುವ ಲವ್ ಜಿಹಾದ್ ವಿರುದ್ಧ ಹೋರಾಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ ಬೆನ್ನಲ್ಲೇ ಸುಗ್ರೀವಾಜ್ಞೆ ಜಾರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಪ್ರಸಕ್ತ ಜಾರಿಗೊಳಿಸುತ್ತಿರುವ ಈ ಕಾನೂನು ಮುಸ್ಲಿಮರನ್ನು ಗುರಿಪಡಿಸಲು, ಸಮಾನತೆಯ ವಿರುದ್ಧ, ಧಾರ್ಮಿಕ ಸ್ವಾತಂತ್ರ್ಯದ ತಡೆ, ವೈಯಕ್ತಿಕ ಮತ್ತು ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯದ ಉಲ್ಲಂಘನೆಗೆ ಈ ಕಾನೂನನ್ನು ಬಳಸಬಹುದೆಂದು ಎಂದು ಹಲವಾರು ಕಾರ್ಯಕರ್ತರು ಮತ್ತು ಕಾನೂನು ತಜ್ಞರು ವಾದಿಸಿದ್ದಾರೆ.