ಲಕ್ನೋ: ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವರಿಷ್ಟ ರಾಹುಲ್ ಗಾಂಧಿ, ಯುವಕರ ಒಗ್ಗಟ್ಟು ಮತ್ತು ವಿದ್ಯಾರ್ಥಿ ಶಕ್ತಿಗೆ ದೊರೆತ ಬಹುದೊಡ್ಡ ಗೆಲುವು ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪರೀಕ್ಷೆ ರದ್ದುಪಡಿಸಿರುವ ಸರ್ಕಾರ, ಆರು ತಿಂಗಳೊಳಗೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿ ಶಕ್ತಿ ಹಾಗೂ ಯುವಕರ ಒಗ್ಗಟ್ಟಿಗೆ ದೊರೆತ ಬಹುದೊಡ್ಡ ಜಯ ಇದಾಗಿದೆ. ಸತ್ಯವನ್ನು ಹತ್ತಿಕ್ಕಲು ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ, ಒಗ್ಗಟ್ಟಾಗಿ ಹೋರಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಟ್ವೀಟ್ನೊಂದಿಗೆ #YuvaNYAY ಹಾಗೂ #UPP_REEXAM ಟ್ಯಾಗ್ಗಳನ್ನು ಬಳಸಿರುವ ರಾಹುಲ್, ‘ಎಲ್ಲರನ್ನು ಒಂದುಗೂಡಿಸುವವರು ಗೆಲ್ಲುತ್ತಾರೆ. ವಿಭಜಿಸುವವರು ತತ್ತರಿಸಿಹೋಗಲಿದ್ದಾರೆ’ ಎಂದೂ ಹೇಳಿದ್ದಾರೆ.