ಯುಪಿ ಚುನಾವಣೆ: 125 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಕಾಂಗ್ರೆಸ್: 50 ಮಹಿಳಾ ಅಭ್ಯರ್ಥಿಗಳು!

Prasthutha|

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಗೊಂಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಭ್ಯರ್ಥಿಗಳ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

- Advertisement -

ಪ್ರಿಯಾಂಕಾ ಗಾಂಧಿ ‘ನಮ್ಮ ಪಟ್ಟಿಯಲ್ಲಿ ಇರುವ ಮಹಿಳೆಯರಲ್ಲಿ ಪತ್ರಕರ್ತರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಅಲ್ಲದೆ ಅಪಾರ ದೌರ್ಜನ್ಯಗಳನ್ನು ಅನುಭವಿಸಿದ ಮಹಿಳೆಯರು ಇದ್ದಾರೆ. ಈ ಹಿಂದೆ ಕೊಟ್ಟ ಮಾತಿನಂತೆ ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಪಕ್ಷದ ಉನ್ನಾವೋ ಅಭ್ಯರ್ಥಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ. ಅವರ ಹೋರಾಟ ಮುಂದುವರಿಸಲು ಅವಕಾಶ ನೀಡಿದ್ದೇವೆ ಎಂದಿದ್ಧಾರೆ.

- Advertisement -

ಸೋನಭದ್ರ ಹತ್ಯಾಕಾಂಡದ ಸಂತ್ರಸ್ತರಲ್ಲಿ ಒಬ್ಬರಾದ ರಾಮರಾಜ್ ಗೊಂಡ್ ಅವರಿಗೂ ಟಿಕೆಟ್ ನೀಡಿದ್ದೇವೆ ಎಂದ ಪ್ರಿಯಾಂಕಾ ಗಾಂಧಿ, ಆಶಾ ಸಹೋದರಿಯರು ಕೊರೋನಾ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರಲ್ಲಿ ಒಬ್ಬರಾದ ಪೂನಂ ಪಾಂಡೆಗೂ ಟಿಕೆಟ್ ನೀಡಿದ್ದೇವೆ ಎಂದಿದ್ದಾರೆ.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಹಿಳೆಯರು ಹೋರಾಟ ಮತ್ತು ಧೈರ್ಯಶಾಲಿ ಮಹಿಳೆಯರು. ಅವರಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ ಎಂದರಲ್ಲದೆ, ದೌರ್ಜನ್ಯಗಳು ನಡೆದರೆ ನಿಮ್ಮ ಹಕ್ಕುಗಳಿಗಾಗಿ ಹೋರಾಡಿ ಎಂಬುದು ನನ್ನ ಸಂದೇಶ ಎಂದು ಪ್ರಿಯಾಂಕ ಗಾಂಧಿ ಹೇಳಿದರು



Join Whatsapp