ಉತ್ತರ ಪ್ರದೇಶ: ಪ್ರವಾದಿ ಅವಹೇಳನದ ವಿರುದ್ಧ ಪ್ರತಿಭಟಸಿದ್ದ ಪ್ರತಿಭಟನಾಕಾರರನ್ನು ಉತ್ತರ ಪ್ರದೇಶದ ಸಹರಾನ್ ಪುರದ ಕೊತ್ವಾಲಿಯ ಪೊಲೀಸರು ಶನಿವಾರ ಬಂಧಿಸಿದ್ದರು. ಇದೀಗ ಬಂಧಿಸಲ್ಪಟ್ಟ ಪ್ರತಿಭಟನಾಕಾರರಿಗೆ ಪೊಲೀಸರು ಮನಬಂದಂತೆ ಹಲ್ಲೆ ನಡೆಸುವ ವೀಡಿಯೋ ವೈರಲ್ ಆಗಿದೆ.
ಬಂಧಿಸಲ್ಪಟ್ಟ ಪ್ರತಿಭಟನಾಕಾರರಿಗೆ ಪೊಲೀಸರು ಲಾಠಿಯಲ್ಲಿ ಹಲ್ಲೆ ನಡೆಸಿ ಕ್ರೌರ್ಯ ಮೆರೆಯುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಪೊಲೀಸರು ಹಲ್ಲೆ ನಡೆಸುವ ವೇಳೆ ಬಂಧಿತ ಪ್ರತಿಭಟನಾಕಾರರು ಚೀರಾಡುವ ದೃಶ್ಯವೂ ವೈರಲ್ ಆಗಿದೆ.
ಇನ್ನು ವೀಡಿಯೋವನ್ನು ಹಂಚಿ ವಿಕೃತಿ ಮೆರೆದಿದ್ದ ಉತ್ತರ ಪ್ರದೇಶ ಬಿಜೆಪಿ ಶಾಸಕ ಸಲಬ್ ಮನಿ ತ್ರಿಪಾಠಿ, “ಗಲಭೆಕೋರರಿಗೆ ರಿಟರ್ನ್ ಗಿಫ್ಟ್” ಎಂದು ತಲೆಬರಹ ನೀಡಿ ಟ್ವೀಟ್ ಮಾಡಿದ್ದರು. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ವೀಟ್ ಅನ್ನು ತ್ರಿಪಾಠಿ ಅಳಿಸಿ ಹಾಕಿದ್ದರು.
ಪೊಲೀಸ್ ಅಧಿಕಾರಿಗಳ ವಿವೇಚನಾರಹಿತ ದಾಳಿಯು ದೊಡ್ಡ ವಿವಾದವನ್ನು ಸೃಷ್ಟಿಸಿದೆ ಮತ್ತು ಇದು ಪೊಲೀಸರ ದಬ್ಬಾಳಿಕೆಗೆ ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.