ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಅಶಾಂತಿ: ಬೊಮ್ಮಾಯಿ ರಾಜೀನಾಮೆಗೆ ಡಿ. ಕೆ. ಶಿವಕುಮಾರ್ ಆಗ್ರಹ

Prasthutha|

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಮಾಜದ ಶಾಂತಿ ಕೆಡಿಸಿ, ದೇಶ, ವಿದೇಶಗಳಲ್ಲಿ ಕರ್ನಾಟಕದ ಗೌರವ ಹರಾಜು ಹಾಕುತ್ತಿರುವ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು, ಈ ಬಿಜೆಪಿ ಸರಕಾರ ತೊಲಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

- Advertisement -

ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷ ಗುರುವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೇರಿ ಬಿಜೆಪಿ ಸರ್ಕಾರದ ಮನಸ್ಥಿತಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಮಾತಿನಂತೆ, ಬಿಜೆಪಿ ಸರ್ಕಾರ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿ, ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್ ವರೆಗೂ, ನಾರಾಯಣ ಗುರುಗಳಿಂದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮಿ, ಮುರುಘಾ ಮಠದ ಸ್ವಾಮಿಗಳು, ಭಗತ್ ಸಿಂಗ್ ವರೆಗೂ ಯಾರೊಬ್ಬರನ್ನೂ ಬಿಡದೆ ಈ ಸರ್ಕಾರ ಅಪಮಾನ ಮಾಡಿದೆ ಎಂದು ಹೇಳಿದ್ದಾರೆ.

ನಾವೆಲ್ಲರೂ ಸಂವಿಧಾನದ ಆಶ್ರಯದಲ್ಲಿ ಬದುಕುತ್ತಿದ್ದು, ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಅಲ್ಲವೇ? ಅಂಬೇಡ್ಕರ್ ಅವರನ್ನು ಮನೆ ದೇವರು ಎಂದು ಪರಿಗಣಿಸಿದ್ದು, ದೇಶದಾದ್ಯಂತ ಅವರ ಅತಿ ಹೆಚ್ಚು ಪುತ್ಥಳಿ ಇವೆ. ನಮ್ಮ ಕಚೇರಿಗಳಲ್ಲಿ ಅವರ ಫೋಟೋ ಇಟ್ಟುಕೊಂಡು ಗೌರವಿಸುತ್ತೇವೆ. ಆದರೆ ಬಿಜೆಪಿ ಯವರು ಅಂಬೇಡ್ಕರ್ ಅವರಿಗೆ ಹೀಗೆ ಅಪಮಾನ ಮಾಡುವುದು ಸರಿಯೇ? ಬಸವಣ್ಣನವರ, ನಾರಾಯಣ ಗುರುಗಳ ಆಚಾರ, ವಿಚಾರ ಪ್ರಚಾರ ಮಾಡುವ ಸಂದರ್ಭದಲ್ಲಿ ಅಪಮಾನ ಮಾಡಲಾಗುತ್ತಿದೆ. ಬುದ್ಧ, ಜೈನರ ತ್ಯಾಗವನ್ನು ನಾವು ಸ್ಮರಿಸುತ್ತೇವೆ. ಈ ಎಲ್ಲರಿಗೂ ಅಪಮಾನ ಮಾಡಿ, ಅವರ ವಿಚಾರಕ್ಕೆ ತಿಲಾಂಜಲಿ ಹಾಕಲು ಪ್ರಯತ್ನಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ, ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದ ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆ ಎಂದರು.

- Advertisement -

ಸರ್ಕಾರ ಮಾಡಲು ಸಾಧ್ಯವಾಗದ, ಅನ್ನ, ಅಕ್ಷರ ಹಾಗೂ ಆಶ್ರಯ ದಾಸೋಹವನ್ನು ಮಾಡಿದ ಶಿವಕುಮಾರ ಸ್ವಾಮೀಜಿ ಅವರ ಹೆಸರು ಅಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.ನಿಮ್ಮ ನಾಗ್ಪುರ ಶಿಕ್ಷಣ ನೀತಿ, ಕೆಲಸಕ್ಕೆ ಬಾರದವನನ್ನು ಇಟ್ಟುಕೊಂಡು, ಆತನ ಕೈಲಿ ಪಠ್ಯ ಪರಿಷ್ಕರಿಸಿ, ಇಡೀ ಕನ್ನಡ ನಾಡಿನ ಸಂಸ್ಕೃತಿ, ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದೀರಿ. ಇದರಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಇದರ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ. ಇದನ್ನು ಸರ್ಕಾರದಿಂದ ನಾವು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಹೋರಾಟ ಜನರ ಪರವಾಗಿ, ಸಾಮಾಜಿಕ ನ್ಯಾಯ, ಗುರು, ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರ ಪರವಾಗಿರಲಿದೆ ಎಂದು ಹೇಳಿದ್ದಾರೆ.

ಸರ್ಕಾರದ ಈ ನಡೆ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಜನರ ಸ್ವಾಭಿಮಾನದ ಪ್ರಶ್ನೆ. ಹೀಗಾಗಿ ಮಠ, ಮಾನ್ಯಗಳು, ಸಂಘಟನೆಗಳು ಸೇರಿದಂತೆ ಎಲ್ಲ ವರ್ಗದ ಜನ ಧ್ವನಿ ಎತ್ತಬೇಕು ಎಂದು ಕರೆ ನೀಡುತ್ತಿದ್ದೇವೆ.ನಾವು ಸಾಮಾನ್ಯ ಜನರಲ್ಲಿ ಒಬ್ಬರಾಗಿ ಹೋರಾಟ ಮಾಡುತ್ತಿದ್ದೇವೆ. ಈ ಹೊಸ ಪುಸ್ತಕವನ್ನು ಕಸದ ಬುಟ್ಟಿಗೆ ಎಸೆದು, ಹಳೆ ಪುಸ್ತಕವನ್ನು ಮುಂದುವರಿಸಬೇಕು ಎಂದರು.

ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ ಅವರು ಪಠ್ಯ ಪುಸ್ತಕ ಹಿಂಪಡೆಯುವುದಿಲ್ಲ ಎಂದರೆ, ಜನ ಅದನ್ನು ಹಿಂಪಡೆಯುವಂತೆ ಮಾಡುತ್ತಾರೆ ‘ ಎಂದರು.

ಈಗಿನ ಪರಿಷ್ಕೃತ ಪಠ್ಯಕ್ಕೆ ಕೆಲವು ತಿದ್ದುಪಡಿ ಮಾಡಲಾಗುವುದು ಎಂಬ ಸರ್ಕಾರದ ನಿಲುವಿನ ಬಗ್ಗೆ ಕೇಳಿದಾಗ, ‘ ಯಾವ ತಿದ್ದುಪಡಿಯ ಅಗತ್ಯವೂ ಇಲ್ಲ. ಅವರ ಮನಸ್ಥಿತಿ ಈಗ ಎಲ್ಲರಿಗೂ ಗೊತ್ತಾಗಿದೆ. ಅವರು ತಮಗೆ ಬೇಕಾದವರನ್ನು ಇಟ್ಟುಕೊಂಡು ಪರಿಷ್ಕರಣೆ ಮಾಡುವುದು ಸಾಬೀತಾಗಿದೆ. ನಿಮ್ಮ ಆರ್ ಎಸ್ ಎಸ್ ಅಜೆಂಡಾ ಮಕ್ಕಳ ಮೇಲೆ ಪ್ರಯೋಗಿಸಬೇಡಿ. ಇದರಿಂದ ಎಲ್ಲ ವರ್ಗದ ಜನರ ಮನಸ್ಸಿಗೆ ಘಾಸಿಯಾಗಿದೆ. ನಾವು ದೇಹದ ಮೇಲೆ ಆಗುವ ಪೆಟ್ಟು ಸಹಿಸಬಹುದು. ಆದರೆ, ನಂಬಿಕೆ ಮೇಲಿನ ಪೆಟ್ಟು ಸಹಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

ಹೋರಾಟ ಎಲ್ಲಿವರೆಗೂ ತಗೆದುಕೊಂಡು ಹೋಗುತ್ತೀರಿ ಎಂಬ ಪ್ರಶ್ನೆಗೆ, ‘ ಈ ಹೋರಾಟವನ್ನು ಪ್ರತಿ ತಾಲೂಕು ಹಾಗೂ ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗುತ್ತೇವೆ. ಈ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು. ನಿಮ್ಮಲ್ಲಿ ಯಾರಾದರೂ ಹೋರಾಟ ಮಾಡಿದರೆ ನಮ್ಮನ್ನು ಕರೆಯಿರಿ. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದರು.

ರಾಜ್ಯಸಭೆ ಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ಅವರು ವಿದೇಶಕ್ಕೆ ಹೋಗಿದ್ದರ ಬಗ್ಗೆ ಅವರೇ ಹೇಳಿದ್ದಾರೆ. ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಮ್ಮ ಅಭ್ಯರ್ಥಿ ಶಿಕ್ಷಣತಜ್ಞ, ಮಂಡ್ಯದ ಯುವ ನಾಯಕನಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ನಾನು ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ ‘ ಎಂದರು.

ನಿಮ್ಮಲ್ಲಿ ಸಂಖ್ಯಾಬಲ ಇಲ್ಲವಲ್ಲ ಎಂಬ ಪ್ರಶ್ನೆಗೆ, ‘ ಯಾರಿಗೆ ಸಂಖ್ಯಾಬಲ ಇದೆ? ಬಿಜೆಪಿಗೂ ಸಂಖ್ಯಾಬಲ ಇಲ್ಲ. ಹೀಗಾಗಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಜೆಡಿಎಸ್ ನವರೂ ತಮ್ಮ ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ನಮಗೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ಬೆಂಬಲ ಬೇಡ ಎಂದು ಹೇಳಿಲ್ಲವೇ? ಈಗ ಅವರು ನಿಲುವು ಬದಲಿಸಲು ಕಾರಣವೇನು? ನಾವು ಎಲ್ಲವನ್ನೂ ಮರೆಯಲು ಸಿದ್ಧವಿದ್ದೇವೆ. ಅದಕ್ಕೆ ನಮಗೆ ಬೆಂಬಲ ನೀಡಿ ಎಂದು ಕೇಳುತ್ತಿದ್ದೇವೆ ‘ ಎಂದರು.

ಗೌಪ್ಯ ಮತ ಮೂಲಕ ಶಾಸಕರ ಖರೀದಿ ಆಗುವುದಿಲ್ಲವೇ ಎಂದು ಕೇಳಿದಾಗ, ‘ ಎಲ್ಲ ಶಾಸಕರು ತಮ್ಮ ಮತವನ್ನು ತೋರಿಸಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಬೆಂಬಲ ಕೋರುತ್ತೇವೆ. ಇದೇ ಉದ್ದೇಶದಿಂದ ನಾವು ನಮ್ಮ ಸಹೋದರ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು ‘  ಎಂದರು.

Join Whatsapp