ಬೆಂಗಳೂರು: ಕೆಲವೊಂದು ಕಾಲೇಜುಗಳಲ್ಲಿ ಸ್ಕಾರ್ಫ್ ಕುರಿತು ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದ್ದು, ಇದು ಮುಸ್ಲಿಮರ ಸಂವಿಧಾನದತ್ತ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.
ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಿ ಬಂದ ಕಾರಣಕ್ಕೆ 6 ಮಂದಿ ವಿದ್ಯಾರ್ಥಿನಿಯರನ್ನು ಹಲವು ದಿನಗಳಿಂದ ತರಗತಿಯಿಂದ ಹೊರ ಹಾಕಲಾಗಿದೆ. ಮಂಗಳೂರು ಸಮೀಪದ ಐಕಳ ಪಾಂಪೈ ಕಾಲೇಜಿನಲ್ಲೂ ಸಂಘಪರಿವಾರದ ಪ್ರಚೋದನೆಗೊಳಗಾದ ಕೆಲವೊಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು ಸ್ಕಾರ್ಫ್ ನಿಷೇಧ ಮಾಡಬೇಕೆಂದರು.
ಚಿಕ್ಕಮಗಳೂರಿನ ಕೊಪ್ಪದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಇದೇ ರೀತಿಯ ವಿವಾದ ಹುಟ್ಟು ಹಾಕಲಾಯಿತು. ವಾಸ್ತವದಲ್ಲಿ ಈಗ ವಸ್ತ್ರ ಸಂಹಿತೆ ಜಾರಿಯಲ್ಲಿರುವುದು ಎಸ್ಸೆಸ್ಸೆಲ್ಸಿ ವರೆಗೆ ಮಾತ್ರ. ಈ ನಡುವೆ ಪಿಯು, ಪದವಿ ಕಾಲೇಜುಗಳಲ್ಲಿ ಯಾವುದೇ ವಸ್ತ್ರ ಸಂಹಿತೆ ಜಾರಿಯಲ್ಲಿ ಇಲ್ಲದಿರುವಾಗ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಬಾರದೆನ್ನುವುದು ವಿತಂಡ ವಾದವಾಗಿದೆ. ಅದರೊಂದಿಗೆ ಸ್ಕಾರ್ಫ್ ಹೆಸರಿನಲ್ಲಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕುವ ಪ್ರಾಂಶುಪಾಲರ ನಡೆಯೂ ಅವಿವೇಕತನದ್ದಾಗಿದೆ. ಈಗಾಗಲೇ ಕಾಲೇಜು ಮಟ್ಟದಲ್ಲಿ ರೂಪಿಸಿರುವ ವಸ್ತ್ರ ಸಂಹಿತೆಯನ್ನು ಪಾಲಿಸಿಕೊಂಡು ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿದ್ದಾರೆ. ಜೊತೆಗೆ ಬಹುತೇಕ ಯೂನಿಫಾರಂನ ಶಾಲನ್ನೇ ಸ್ಕಾರ್ಫ್ ಅನ್ನಾಗಿ ಬಳಸಲಾಗುತ್ತಿದೆ. ವಾಸ್ತವಾಂಶ ಹೀಗಿರುವಾಗ ಸಾಂಪ್ರಾದಾಯಿಕ ಸ್ಕಾರ್ಫ್ ಅನ್ನು ಧರಿಸಬಾರದೆಂಬ ಒತ್ತಡ ಹೇರುವುದು ಸಂವಿಧಾನ ಬಾಹಿರವಾಗಿದೆ.
ಹಿಂದು ಸಮುದಾಯದ ವಿದ್ಯಾರ್ಥಿನಿಯರು ಹೇಗೆ ಬಿಂದಿ, ಕುಂಕುಮವನ್ನು ಹಚ್ಚುತ್ತಾರೆಯೋ, ಕಾಲೇಜುಗಳಲ್ಲಿ ಕ್ರೈಸ್ತ ಭಗಿನಿಯರು ಹೇಗೆ ತಲೆವಸ್ತ್ರವನ್ನು ಬಳಸುತ್ತಾರೆಯೋ, ಹಾಗೆಯೇ ಸ್ಕಾರ್ಫ್ ಕೂಡ ಮುಸ್ಲಿಮ್ ವಿದ್ಯಾರ್ಥಿನಿಯರ ಒಂದು ಸಾಂಪ್ರಾದಾಯಿಕ ಆಚರಣೆಯಾಗಿದೆ. ಅನಗತ್ಯ ಸ್ಕಾರ್ಫ್ ವಿವಾದ ಆಗಾಗ್ಗೆ ತಲೆದೋರುತ್ತಿದ್ದು, ಇದು ಮುಸ್ಲಿಮರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಷಡ್ಯಂತ್ರವೂ ಆಗಿದೆ. ಸ್ಕಾರ್ಫ್ ವಿವಾದ ನಡೆದ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಸಂಘಪರಿವಾರವೇ ಪ್ರಚೋದನೆ ನೀಡಿತ್ತು ಎಂಬುದು ಗಮನಾರ್ಹವಾಗಿದೆ. ಸಭ್ಯತೆ ಹೊಂದಿದ ತಮ್ಮಿಷ್ಟದ ಉಡುಪು ಧರಿಸಲು ವಿದ್ಯಾರ್ಥಿನಿಯರು ಸರ್ವ ಸ್ವತಂತ್ರರಾಗಿದ್ದಾರೆ. ಧರಿಸಿದ ಉಡುಪಿನಿಂದ ಯಾವುದೇ ಸಮಾನತೆ ತರಲು ಸಾಧ್ಯವಿಲ್ಲ. ಪೂರ್ವಾಗ್ರಹಪೀಡಿತರಾಗಿ ಅನಗತ್ಯ ಸ್ಕಾರ್ಫ್ ವಿವಾದವನ್ನು ಹುಟ್ಟು ಹಾಕುವ ಬದಲು ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣ ಬಗ್ಗೆ ಚರ್ಚಿಸಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ನಾಸಿರ್ ಪಾಶ ಹೇಳಿದ್ದಾರೆ.