ನವದೆಹಲಿ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸುಪ್ರೀಮ್ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ದೆಹಲಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಮೂವರು ಆರೋಪಿಗಳಲ್ಲಿ ಒಬ್ಬರಾದ ಶುಭಂ ಸಿಂಗ್ ಅವರ ತಂದೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತನ್ನ ಮೇಲೆ ಪ್ರಕರಣ ದಾಖಲಾಗಿದ್ದು, ಉನ್ನಾವೋ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಸಂತ್ರಸ್ತೆ ಸುಪ್ರೀಮ್ ಕೋರ್ಟ್’ಗೆ ತಿಳಿಸಿದ್ದಾರೆ.
ಸಂತ್ರಸ್ತೆಯು ಪೊಲೀಸರಿಗೆ ನೀಡಿದ ಆಕೆಯ ವಯಸ್ಸಿನ ದಾಖಲೆ ನಕಲಿ ಎಂದು ಆರೋಪಿ ಶುಭಂ ಸಿಂಗ್ ಅವರ ತಂದೆ ಉನ್ನಾವೋದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ತಂದೆ ದಾಖಲಿಸಿದ ಪ್ರಕರಣವನ್ನು ಕೌಂಟರ್’ಬ್ಲಾಸ್ಟ್ ಪ್ರಕರಣ ಎಂದು ಸಂತ್ರಸ್ತೆ ಕರೆದಿದ್ದಾರೆ.
ಉನ್ನಾವೋ ನ್ಯಾಯಾಲಯದ ಮುಂದೆ ಪ್ರಕರಣವನ್ನು ವಿಚಾರಣೆಗೊಳಪಡಿಸುವುದು ತನ್ನನ್ನು ಬೆದರಿಸುವ, ಮೌನವಾಗಿಸುವ ಮತ್ತು ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದೆ ಮತ್ತು ಉನ್ನಾವೋದಲ್ಲಿ ತನ್ನ ಜೀವಕ್ಕೆ ಗಂಭೀರ ಅಪಾಯವಿದೆ. ಆದ ಕಾರಣ ಈ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಆಕೆ ಸುಪ್ರೀಮ್ ಕೋರ್ಟ್’ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
2017 ರಲ್ಲಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಮತ್ತು ಇತರರು ಅಪ್ರಾಪ್ತ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿತ್ತು.