ಉನ್ನಾವೋ ಸಂತ್ರಸ್ತೆಯ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಖುಲಾಸೆ!
Prasthutha: December 21, 2021

ಹೊಸದಿಲ್ಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಬಾಲಕಿ ಹಾಗೂ ಆಕೆಯ ಕುಟುಂಬದವರನ್ನು ಹತ್ಯೆಗೈಯಲು ಯತ್ನಿಸಿದ್ದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ಕುಲದೀಪ್ ಮತ್ತು ಇತರ ಐವರ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದ ನ್ಯಾಯಾಲಯ ಉಳಿದ ನಾಲ್ವರು ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿಯಲಿದೆ ಎಂದು ಹೇಳಿದೆ.
2017ರಲ್ಲಿ ಉತ್ತರಪ್ರದೇಶದ ಉನ್ನಾವೋದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿತ್ತು. ನಂತರ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೇ ವಾಹನ ಡಿಕ್ಕಿ ಹೊಡೆದು ಬಾಲಕಿ ಹಾಗೂ ಆಕೆಯ ಕುಟುಂಬದವರ ಹತ್ಯಾ ಯತ್ನ ನಡೆದಿತ್ತು. ಅಪಘಾತದಲ್ಲಿ ಸಂತ್ರಸ್ತೆಯ ಸಂಬಂಧಿಕರಾದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಬಾಲಕಿ ಮತ್ತು ಆಕೆಯ ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು.
