ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಉಡುಪಿ ಮೂಲದ ರಶ್ಮಿ ಸಾಮಂತ್ ರಾಜೀನಾಮೆ

Prasthutha|

- Advertisement -

ಲಂಡನ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಸ್ಟೂಡೆಂಟ್ ಯೂನಿಯನ್ (ಎಸ್‌ಯು) ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಉಡುಪಿ ಮೂಲದ ರಶ್ಮಿ ಸಾಮಂತ್ ಈ ಹಿಂದೆ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ “ಜನಾಂಗೀಯ” ಮತ್ತು “ಸಂವೇದನಾರಹಿತವಾದ” ಹೇಳಿಕೆ ನೀಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

2017ರಲ್ಲಿ ಮಲೇಷ್ಯಾಕ್ಕೆ ಭೇಟಿ ನೀಡಿದ ಫೋಟೋಗಳನ್ನು ಹೊಂದಿದ್ದ ಪೋಸ್ಟ್ ನಲ್ಲಿ ರಶ್ಮಿ ಸಂವೇದನಾ ರಹಿತ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

- Advertisement -

ಪ್ರಾರಂಭದಲ್ಲಿ ರಶ್ಮಿ ಸಾಮಂತ್ ಕ್ಷಮೆ ಯಾಚಿಸಿದ್ದರೂ ರಾಜೀನಾಮೆಗಾಗಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ತಾವು ಆಯ್ಕೆಯಾದ ಸ್ಟೂಡೆಂಟ್ ಯೂನಿಯನ್ ಗೆ ರಾಜೀನಾಮೆ ಸಲ್ಲಿಸುವುದಾಗಿ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿ ಅವರ ಕ್ಷಮೆಯಾಚನೆಗೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಚೈನೀಸ್ ಸೊಸೈಟಿ (ಒಯುಸಿಎಸ್) ಈ ರೀತಿ ಪ್ರತಿಕ್ರಿಯೆ ನೀಡಿದೆ: ‘ವಿಷಾದನೀಯ ಸಂಗತಿಯಂತೆ ನಾವು ಇನ್ನೂ ರಶ್ಮಿ ಸಾಮಂತ್ ಅವರಲ್ಲಿ ನೇರವಾಗಿ ಏನನ್ನೂ ಕೇಳಲಿಲ್ಲ. ಅವರ ಕ್ಷಮೆಯಾಚನೆಯು ಒಯುಸಿಎಸ್ ಗೆ ಪ್ರಾಮಾಣಿಕವಾಗಿ ಕಾಣುತ್ತಿಲ್ಲ. ನಾವು ರಶ್ಮಿಯನ್ನು ಎಸ್‌ಯು ಅಧ್ಯಕ್ಷರಾಗಿ ನೋಡಲು ಸಾಧ್ಯವಿಲ್ಲ”.

ಮಣಿಪಾಲ ಹಾಗೂ ಉಡುಪಿಯಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದ ರಶ್ಮಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದು ಆಕ್ಸ್ ಫರ್ಡ್ ವಿವಿಯ ಲಿನಾಕರ್ ಕಾಲೇಜಿನಲ್ಲಿ ಎರಡನೇ ವರ್ಷದ ಸಿಸ್ಟಮ್ಸ್ ವಿಷಯದ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಇದೀಗ ರಶ್ಮಿ ರಾಜೀನಾಮೆ ನೀಡಿದ ಕಾರಣ ವಿದ್ಯಾರ್ಥಿ ಸಂಘದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಉಪಚುನಾವಣೆ ನಡೆಯಲಿದೆ.



Join Whatsapp