ಮಂಗಳೂರು: ಚಡ್ಡಿ, ಕರಿಟೋಪಿ, ಕೈಯ್ಯಲ್ಲೊಂದು ದೊಣ್ಣೆ ಹಿಡಿದುಕೊಂಡು ನಾವು ದೇಶ ಕಾಪಾಡುತ್ತೇವೆ ಎಂದು ಹೇಳುವ ಮೂಲಕ ರಾಷ್ಟ್ರದಲ್ಲಿರುವ 50 ಲಕ್ಷ ಮಂದಿ ಸೈನಿಕರು, ಪೊಲೀಸರು, ಪ್ಯಾರಾ ಮಿಲಿಟ್ರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರ್ ಎಸ್ ಎಸ್ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಈ ರಾಷ್ಟ್ರವನ್ನು ರಕ್ಷಣೆ ಮಾಡಲು ಯೋಧರಿದ್ದಾರೆ. ಇವರು ಯಾವತ್ತೂ ರಾಷ್ಟ್ರ ರಕ್ಷಣೆಗೆ ಮುಂದೆ ನಿಂತಿರಲಿಲ್ಲ. ಧರ್ಮರಕ್ಷಣೆ ವಿಚಾರ ಬಂದಾಗಲೂ ಉಪನಿಷತ್ತು, ಭಗವದ್ಗೀತೆಯಲ್ಲಿ ಎಲ್ಲೂ ಕಾಕಿಚಡ್ಡಿ, ಕರಿಟೋಪಿಯ ಬಗ್ಗೆ ಉಲ್ಲೇಖವಿಲ್ಲ. ಕಾಕಿಚಡ್ಡಿ, ಕರಿಟೋಪಿ ಕಾಣ ಸಿಗುವುದು ಜರ್ಮನಿಯ ಹಿಟ್ಲರ್ ಆರ್ಮಿಯಲ್ಲಿ. ಇವರು ಅದನ್ನು ತೊಟ್ಟು ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತೇನೆಂದು ಹೇಳುತ್ತಾರಲ್ಲ ಇದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ. ಅವರ ಅಸ್ಮಿತೆಯನ್ನೇ ಕಾಪಾಡಲು ಅವರಿಗೆ ಆಗುತ್ತಿಲ್ಲ. ಅದರ ಮೇಲೆ ದೇಶ ಕಾಪಾಡಲು ಇವರಿಗೆ ಸಾಧ್ಯವಿದೆಯೇ. ಕಾಕಿಚಡ್ಡಿಯೆಂದರೆ ತ್ಯಾಗ-ಬಲಿದಾನಗಳ ಸಂಕೇತ ಎಂದು ಹೇಳುತ್ತಿದ್ದವರು ಈಗ ಪ್ಯಾಂಟ್ ಗೆ ಹೇಗೆ ಬಂದರು. ಅಧಿಕಾರ, 40% ಕಮಿಷನ್ ಬಂದಿದೆ ನೋಡಿ ಅದರಿಂದ ಪ್ಯಾಂಟ್, 10 ಲಕ್ಷ ರೂ. ಸೂಟ್ ಎಲ್ಲವೂ ಬರುತ್ತದೆ ಎಂದು ಲೇವಡಿ ಮಾಡಿದರು.
ಆರ್ ಎಸ್ಎಸ್ ಹಿಂದಿ ಬೆಲ್ಟ್ ಬಿಟ್ಟು ಬೇರೆ ಎಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ ಎಂದು ಪ್ರಶ್ನಿಸಿದ ಅವರು, ದೇಶ ಬರೀ ಹಿಂದಿ ಬೆಲ್ಟ್ ಮಾತ್ರವಲ್ಲ, ದಕ್ಷಿಣ ಭಾರತ, ಪೂರ್ವ ಭಾರತ, ಪಶ್ಚಿಮ ಘಟ್ಟಗಳಲ್ಲೂ ಇದೆ. ಆದ್ದರಿಂದ ದೇಶ ಆರ್ ಎಸ್ಎಸ್ ಚಿಂತನೆ ಮೇಲೆ ಮಾತ್ರ ನಿಂತಿಲ್ಲ. ಅವರು ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಿದ್ದವರು. ಆದ್ದರಿಂದ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಹಿಜಾಬ್ ವಿಚಾರದಲ್ಲಿ ಕೋರ್ಟ್ ಸ್ಪಷ್ಟವಾದ ತೀರ್ಮಾನ ನೀಡಿದೆ. ಕೋರ್ಟ್ ತೀರ್ಮಾನವನ್ನು ಅನುಷ್ಠಾನಕ್ಕೆ ತನ್ನಿ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಹೋರಾಟ ನಡೆಸಿ. ಉಡುಪಿಯ ಹಿಜಾಬ್ ವಿವಾದದ ವಿದ್ಯಾರ್ಥಿನಿಯರು ಕೋರ್ಟ್ ಗೆ ಹೋಗಿದ್ದಾರೆ. ಹಿಂದೂ ರಾಷ್ಟ್ರ, ಹಿಂದುತ್ವ ಎಂದು ಹೇಳುತ್ತಾ ಗಲಾಟೆ ಮಾಡುವವರಿಗೆ ಕೋರ್ಟ್ ಗೆ ಹೋಗುವಷ್ಟು ಯೋಗ್ಯತೆಯಿಲ್ಲ. ಆದ್ದರಿಂದ ಇವರೂ ಸಂವಿಧಾನಿಕವಾಗಿ ಕೋರ್ಟ್ ನಲ್ಲಿ ಹೋರಾಟ ಮಾಡಲು ಕಲಿಯಲಿ ಎಂದರು.
ಅದುಬಿಟ್ಟು ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಅಡ್ಡ ಹಾಕೋದಲ್ಲ. ಅದು ಯಾರೂ ವೀರಾಧಿವೀರರು ಮಾಡುವ ಕೆಲಸವಲ್ಲ. ರಣಹೇಡಿಗಳು ಆ ಕೆಲಸ ಮಾಡೋದು. ಆ ವಿದ್ಯಾರ್ಥಿನಿಯರಿಗೆ ನಾನು ಸೆಲ್ಯೂಟ್ ಹೇಳ್ತೇನೆ. ತಮ್ಮ ಹಕ್ಕಿಗಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ವಿಚಾರವಾಗಿ ಗಲಾಟೆ ಎಬ್ಬಿಸಿದವರು ಬಿಜೆಪಿ ಹಾಗೂ ಸಂಘಪರಿವಾರದವರು. ವಿದ್ಯಾರ್ಥಿಗಳಿಗೆ ಇಂತಹ ವಿಷಬೀಜ ಬಿತ್ತಿರೋದರಿಂದಲೇ ದ.ಕ.ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿಯಲ್ಲಿ ಫಲಿತಾಂಶ 20ನೇ ಸ್ಥಾನಕ್ಕೆ ಕುಸಿದಿದೆ. ಆದ್ದರಿಂದ ಈ ದೇಶದಲ್ಲಿ ವಿವಿಧ ಧರ್ಮಗಳ ಸಂಪ್ರದಾಯಗಳಿವೆ. ಎಲ್ಲವನ್ನೂ ಪಾಲಿಸುತ್ತಾ ಹೋದಲ್ಲಿ ಹುಚ್ಚರಾಗುತ್ತಾರೆ ಎಂದರು.
ಭೂಸುಧಾರಣೆಯಲ್ಲಿ ಅನುಕೂಲ ಪಡೆದಿರುವ ಸಮುದಾಯ ಬಿಜೆಪಿ ಕಡೆಗೆ ವಾಲಿದೆ ಎಂದರೆ ಕಾಂಗ್ರೆಸ್ ನಲ್ಲಿ ನ್ಯೂನ್ಯತೆಗಳಿವೆ ಎಂದೆನಿಸುತ್ತದೆ. ಅಲ್ಲದೆ ಬಿಜೆಪಿ ಎಂಬ ನಕಲಿ ದೇಶಭಕ್ತರು ಜನರಲ್ಲಿ ವಿಷಬೀಜವನ್ನು ಬಿತ್ತಿ ಉಪಯೋಗಿಸುತ್ತಿದ್ದಾರೆ. ಅಂತವರು ಕಾಲಾಳುಗಳಾಗುತ್ತಿದ್ದಾರೆ. ಸೂತ್ರಧಾರರ ಕೈಯ ಶೋಷಿತರಾಗುತ್ತಿದ್ದಾರೆ. ಆದ್ದರಿಂದ ಅದನ್ನೆಲ್ಲಾ ಸರಿಪಡಿಸಬೇಕೆಂದು ದ.ಕ.ಜಿಲ್ಲೆಗೆ ನಾನು ಹೆಚ್ಚಿನ ಸಮಯವನ್ನು ನೀಡಬೇಕಿದೆ ಎಂದ ಬಿ.ಕೆ.ಹರಿಪ್ರಸಾದ್ ಅವರು ದ.ಕ.ಜಿಲ್ಲಾ ಸಂಸತ್ ಸದಸ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಚಿಂತನಸಭೆ ಮಾಡಿದ್ದು, ಪಕ್ಷದ ಬಗ್ಗೆ ಆಳವಾದ ಚರ್ಚೆಯಾಗಿದೆ. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ಹುರಿದುಂಬಿಸಬೇಕೆಂದು ಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕರು ಸೇರಿ ಮಾಡಲಿದ್ದಾರೆ. ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್ ಭದ್ರವಾಗಲಿದೆ. ನಾವೇನು ಇಲ್ಲಿ ಠೇವಣಿ ಕಳೆದುಕೊಂಡಿಲ್ಲ. ಸೋಲು – ಗೆಲುವು ಸಾಮಾನ್ಯ. ಬಿಜೆಪಿ ಚುನಾವಣೆ, ಓಟಿಗೋಸ್ಕರ ಜನರನ್ನು ಯಾವ ರೀತಿ ತಪ್ಪುದಾರಿಗೆ ಎಳೆಯುತ್ತಾರೆ ಎಂಬುದನ್ನು ತಿಳಿಸಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡಬೇಕು. ಅದರಲ್ಲಿ ನಾನೂ ಕೂಡಾ ಮುಂದೆ ಇದ್ದೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು, ಅಬ್ಬಕ್ಕ ರಾಣಿ ವಿಚಾರವನ್ನು ಕೈಬಿಟ್ಟ ಮೇಲೆ ಜನತೆಗೆ ಬಿಸಿ ತಟ್ಟಿದೆ. ಬಿಜೆಪಿಗರು ತಮ್ಮ ಸ್ವಾರ್ಥಕ್ಕೋಸ್ಕರ ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ. ಗುಪ್ತಕಾರ್ಯ ಸೂಚಿಯನ್ನು ಅನುಷ್ಠಾನ ಮಾಡಲು ಹಿಂಬಾಗಿಲಿನಿಂದ ಪ್ರಯತ್ನ ಪಡುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ನಾಡಿನ ಸಾಹಿತಿಗಳು, ಪ್ರೊಫೆಸರ್ ಗಳನ್ನು ಕೈಬಿಟ್ಟು ಅವನು ಯಾವನೋ ಚರಂಡಿಯಲ್ಲಿರುವವನನ್ನು ತಂದು ಪ್ರೊಫೆಸರ್ ಎಂದು ಹೇಳಿ ಕೂರಿಸಿದ್ದಾರೆ. ತಲೆಯಲ್ಲಿ ಏನೂ ಇರದವನನ್ನು ತಂದು ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ನಾವು ಬಿಡೋದಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಯಾರು ಮಾಡಿದರೆಂದರೆ ಆರ್ ಎಸ್ ಎಸ್ ಮಾಡಿದೆ ಎಂದು ಹೇಳೋಕೆ ಆಗೋಲ್ಲ. ಯಾಕದರೆ ಅದೊಂದು ರಿಜಿಸ್ಟ್ರೆಡ್ ಸಂಘವಲ್ಲ ಎಂದರು.
ಜನರಲ್ಲಿ ಸುಳ್ಳು ಹಬ್ಬಿಸಿ, ದ್ವೇಷ ಬಿತ್ತಿ, ಅವರನ್ನು ಬಿಜೆಪಿ ಧರ್ಮಾಂದರನ್ನಾಗಿ ಮಾಡುತ್ತಿದ್ದು, ಇದು ದೇಶದ ಏಕತೆಗೆ ಮಾರಕವಾಗಿದೆ. ಇದರ ವಿರುದ್ಧ ಜನರಲ್ಲಿ ಜಾಗೃತಿ ಆರೆಸ್ಸೆಸ್ ತುಂಬಿರುವ ಅಫೀಮನ್ನು ಹೊರತೆಗೆಯುತ್ತೇವೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸುಧಾರಣೆಯಿಂದ ಅತಿ ಹೆಚ್ಚು ಲಾಭ ಪಡೆದವರು ಇದ್ದಾರೆ. ಆದರೆ ದುರದೃಷ್ಟವಶಾತ್ ಇಂದು ಅವರೆಲ್ಲರೂ ಬಿಜೆಪಿ ಬೆಂಬಲಿಗರಾಗಿದ್ದಾರೆ. ಶೋಷಿತ ಸಮುದಾಯವನ್ನು ಸಂಘಪರಿವಾರ ತನ್ನ ಕಾಲಾಳುಗಳನ್ನಾಡಿ ಮಾಡಿಕೊಂಡು ಅವರಲ್ಲಿ ವಿಷ ಬೀಜ ಬಿತ್ತುತ್ತಿದೆ. ಇಂತಹವರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಂಘಪರಿವಾರದ ಗರಡಿಯಿಂದ ಹೊರತೆಗೆಯುವ ಕೆಲಸವನ್ನು ಮಾಡುತ್ತೇವೆ ಎಂದರು.
ಜನರಲ್ಲಿ ಆರೆಸ್ಸೆಸ್ ತುಂಬಿದ ಅಫೀಮನ್ನು ತೆಗೆದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ: ಬಿ.ಕೆ.ಹರಿಪ್ರಸಾದ್
Prasthutha|