ಹಾಸನ: ಅಂತಾರಾಷ್ಟೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಳೇಬೀಡಿನಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ.
ಇದಕ್ಕಾಗಿ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ಯೋಗದಲ್ಲಿ ಭಾಗಿಯಾಗುವ ಶಾಲಾ ವಿದ್ಯಾರ್ಥಿಗಳು ಇಂದು ಬೆಳಗ್ಗೆಯಿಂದಲೇ ತಾಲೀಮು ನಡೆಸಿದರು.
ನಾಳೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಯೋಗ ದಿನಾಚರಣೆ ಆಯೋಜನೆ ಮಾಡಲಾಗಿದ್ದು, ನೂರಾರು ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವರು ಸಾಮೂಹಿಕ ಯೋಗ ಮಾಡಲಿದ್ದಾರೆ. ಇವರೊಂದಿಗೆ ಜಿಲ್ಲಾಡಳಿತ ಅಧಿಕಾರಿಗಳೂ ಭಾಗಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ದೇವಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಯೋಗಭ್ಯಾಸದಲ್ಲಿ ತೊಡಗಿದ್ದಾರೆ.
ನಾಳೆ ಸುಮಾರು 750 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 750 ಸಾರ್ವಜನಿಕರು ಸೇರಿ 1500 ಮಂದಿ ಭಾಗಿಯೊಂದಿಗೆ ಯೋಗಾ ಕಾರ್ಯಕ್ರಮ ನಡೆಯಲಿದೆ.
ಮೂರು ಕಡೆ ಕಾರ್ಯಕ್ರಮ:
ಇದಲ್ಲದೆ ಜಿಲ್ಲೆಯ ಮೂರು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ನಾಳೆ ಯೋಗ ದಿನ ಕಾರ್ಯಕ್ರಮ ನಡೆಯಲಿದೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಆವರಣ, ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹಾಗೂ ಅರಸೀಕೆರೆಯ ಗಾಂಧಿ ಚಿತಾ ಭಸ್ಮದ ಆವರಣದಲ್ಲಿ ಏಕ ಕಾಲದಲ್ಲಿ ಯೋಗಾ ಡೇ ಜರುಗಲಿದೆ.
ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆಗಬೇಕಿರುವ ಸಿದ್ಧತಾ ಕಾರ್ಯಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ಮ್ಯಾಟ್ ಇಲ್ಲದೆ ಪರದಾಟ:
ಕೇಂದ್ರ ಸಚಿವರೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳಿಗೆ ದೇವಾಲಯ ಆವರಣದಲ್ಲಿ ಇಂದು ತಾಲೀಮು ನಡೆಸಲಾಯಿತು. ಆದರೆ ಬಹುತೇಕ ಮಕ್ಕಳು ಯೋಗ ಮ್ಯಾಟ್ ಇಲ್ಲದೆ ಪರದಾಡಿದರು.
ಹೆಚ್ಚು ಮಕ್ಕಳು ಮನೆಯಿಂದಲೇ ಪೋಷಕರು ನೀಡಿದ ಟವೆಲ್, ಬ್ಲಾಂಕೆಟ್, ವೇಲ್, ರಗ್ಗು ಇತ್ಯಾದಿ ವಸ್ತುಗಳನ್ನೇ ತಂದು ಯೋಗಾಭ್ಯಾಸ ನಡೆಸಿದರು. ಇದರಿಂದ ಕೆಲ ಮಕ್ಕಳು ಮುಜುಗರ ಸಹ ಅನುಭವಿಸಿದರು.