2020ರ ದೆಹಲಿ ಗಲಭೆ ತಡೆಯುವಲ್ಲಿ ಕೇಂದ್ರ ಗೃಹ ಸಚಿವಾಲಯ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ: ವರದಿ

Prasthutha|

ನವದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯನ್ನು ತಡೆಯುವಲ್ಲಿ ಕೇಂದ್ರ ಗೃಹ ಸಚಿವಾಲಯ, ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಮಾಜಿ ನ್ಯಾಯಾಧೀಶರು, ಮಾಜಿ ಸರ್ಕಾರಿ ಅಧಿಕಾರಿಗಳು ನಡೆಸಿದ ಅಧ್ಯಯನದ ವರದಿಯಲ್ಲಿ ಬಹಿರಂಗವಾಗಿದೆ.

- Advertisement -

ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿ 23 – 26 ರ ನಡುವೆ ಬೃಹತ್ ಮಟ್ಟದ ಗಲಭೆ ಉಂಟಾಗಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಲಕ್ಷ್ಯ ತೋರಿಸಿದ ಪರಿಣಾಮ 53 ಮಂದಿ ಜೀವವನ್ನು ಕಳೆದುಕೊಂಡರು (ಅದರಲ್ಲಿ ಹೆಚ್ಚಿನವರು ಮುಸ್ಲಿಮರು) ಮತ್ತು ನೂರಾರು ಮಂದಿ ಗಾಯಗೊಂಡರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2019ರಲ್ಲಿ ದೇಶವನ್ನು ಬೆಚ್ಚಿಬೀಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆಯ ಹಿನ್ನೆಲೆಯಲ್ಲಿ 2020ರಲ್ಲಿ ಈಶಾನ್ಯ ದೆಹಲಿಯ ಹಿಂಸಾಚಾರದ ಕುರಿತು ನಾಗರಿಕ ಸಮಿತಿ ವರದಿ 2020 ಎಂಬ ಹೆಸರಿನಲ್ಲಿ ವರದಿಯೊಂದನ್ನು ರಚಿಸಿದೆ. ಮಾಜಿ ನ್ಯಾಯಾಧೀಶರಾದ ಎಪಿ ಶಾ, ಆರ್. ಎಸ್. ಸೋಧಿ, ಅಂಜನಾ ಪ್ರಕಾಶ್, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಸೇರಿದಂತೆ ಸುಪ್ರೀಮ್ ಕೋರ್ಟ್’ನ ನಿವೃತ್ತ ನ್ಯಾಯಾಧೀಶ ಮದನ್ ಬಿ ಲೋಕೂರ್ ನೇತೃತ್ವದ ನಾಗರಿಕ ಸಮಿತಿ ಈ ವರದಿಯನ್ನು ರಚಿಸಿದೆ.

- Advertisement -

ದೆಹಲಿ ರಾಜ್ಯ ಸರ್ಕಾರದ ಅಧೀನದಲ್ಲಿರದ ಮತ್ತು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರೂ ಕೂಡ ವಾಸ್ತವಾಂಶ ಬೇರೆಯೇ ಆಗಿತ್ತು ಎಂಬ ಆಘಾತಕಾರಿ ಅಂಶವನ್ನು ವರದಿಯನ್ನು ತಿಳಿಸಲಾಗಿದೆ.
ಫೆಬ್ರವರಿ 24-25ರ ಮಧ್ಯೆ ಪೊಲೀಸ್ ಕಂಟ್ರೋಲ್ ರೂಮ್’ಗೆ ಸಾಕಷ್ಟು ಕರೆಗಳೂ ಬಂದರೂ ಕೂಡ ಪೊಲೀಸರು ನಿಷ್ಕ್ರೀಯತೆ ತೋರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಗಲಭೆ ಪ್ರಾರಂಭವಾಗುವ ಮೊದಲು ಆಡಳಿತರೂಢ ಬಿಜೆಪಿ ಪಕ್ಷದ ಸದಸ್ಯರು ಅನೇಕ ಕಡೆಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ವರದಿ ಬಹಿರಂಗಪಡಿಸುತ್ತದೆ.

ಈಗಿನ ಕೇಂದ್ರ ಮಾಹಿತಿ, ಪ್ರಸಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಧಾರ್ಮಿಕ ದ್ವೇಷವನ್ನು ಹರಡುವ ಹೇಳಿಕೆ ಮತ್ತು ಭಾಷಣವನ್ನು ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಆಜ್ ತಕ್, ಜೀ ನ್ಯೂಸ್, ಇಂಡಿಯಾ ಟಿವಿ ಮತ್ತು ರಿಪಬ್ಲಿಕ್ ಭಾರತ್ ಸೇರಿದಂತೆ ಹಲವು ಮಾಧ್ಯಮಗಳು ಕೇಂದ್ರ ಸರ್ಕಾರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಏಕಪಕ್ಷೀಯ ವರದಿಯನ್ನು ಪ್ರಕಟಿಸಿತ್ತು ಎಂದು ಈ ವರದಿಯಲ್ಲಿ ಬರೆಯಲಾಗಿದೆ.

ದೆಹಲಿಯ ಆಮ್ ಆದ್ಮಿ ಸರ್ಕಾರವು ಸಂತ್ರಸ್ತರಿಗೆ ಸಕಾಲಿಕವಾಗಿ ಪರಿಹಾರ ಮತ್ತು ನೆರವನ್ನು ನೀಡಲಿಲ್ಲ ಎಂದು ವರದಿ ಬಹಿರಂಗಪಡಿಸಿದ್ದು, ಎಎಪಿ ಸರ್ಕಾರ ಪರಿಸ್ಥಿತಿಯನ್ನು ಶಾಂತಗೊಳಿಸುವ ನಿಟ್ಟಿನಲಿ ನಾಗರಿಕರ ನಡುವೆ ಮಧ್ಯಸ್ಥಿಕೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Join Whatsapp