ಜನಸಂಖ್ಯೆ ಅಸಮತೋಲನ ತಡೆಯಲು ಸಮಾನ ನಾಗರಿಕ ಸಂಹಿತೆ ಅಗತ್ಯ: ಮೋಹನ್ ಭಾಗವತ್

ನಾಗ್ಪುರ: ಜನಸಂಖ್ಯೆಯ ಬಗ್ಗೆ ಸಮಗ್ರ ನೀತಿಗೆ ಕರೆ ನೀಡಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು ಮತ್ತು ಅದು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಆಗ ಮಾತ್ರ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಫಲಿತಾಂಶಗಳನ್ನು ನೀಡುತ್ತವೆ ಎಂದು ಹೇಳಿದ್ದಾರೆ.


ಆರೆಸ್ಸೆಸ್ ಸಂಸ್ಥಾಪನಾ ದಿನವಾದ ವಿಜಯದಶಮಿಯ ಪ್ರಯುಕ್ತ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಷ್ಟೂ ಹೊರೆಯೂ ಹೆಚ್ಚಾಗುತ್ತದೆ ಎಂಬುದು ನಿಜ. ಜನಸಂಖ್ಯೆಯನ್ನು ಹೊರೆ ಎಂದು ಭಾವಿಸುವ ಬದಲಿಗೆ ಅದನ್ನು ಶಕ್ತಿ ಎಂದು ಪರಿಗಣಿಸಬೇಕು. ಜನಸಂಖ್ಯೆಯನ್ನು ಸರಿಯಾಗಿ ಬಳಸಿದರೆ, ಅದು ಸಂಪನ್ಮೂಲವಾಗುತ್ತದೆ. ಜನಸಂಖ್ಯೆ ಅಸಮತೋಲನವಾಗದಂತೆ ತಡೆಯಲು ಸಮಾನ ನಾಗರಿಕ ಸಂಹಿತೆ ಅಗತ್ಯ ಎಂದು ಹೇಳಿದ್ದಾರೆ.

- Advertisement -


50 ವರ್ಷಗಳ ನಂತರ ನಮ್ಮ ದೇಶವು ಎಷ್ಟು ಜನರಿಗೆ ಆಹಾರ ಮತ್ತು ಬೆಂಬಲ ನೀಡಬಹುದು ಎಂಬುದನ್ನು ಸಹ ನಾವು ಪರಿಗಣಿಸಬೇಕು. ಜನಸಂಖ್ಯಾ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನಸಂಖ್ಯಾ ನಿಯಂತ್ರಣ ಮತ್ತು ಧರ್ಮಾಧಾರಿತ ಜನಸಂಖ್ಯಾ ಸಮತೋಲನವು ಒಂದು ಪ್ರಮುಖ ವಿಷಯವಾಗಿದೆ, ಅದನ್ನು ಇನ್ನು ಮುಂದೆ ನಿರ್ಲಕ್ಷಿಸಲಾಗುವುದಿಲ್ಲ. ಆದ್ದರಿಂದ ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು ಮತ್ತು ಅದು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಆಗ ಮಾತ್ರ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಫಲಿತಾಂಶಗಳನ್ನು ನೀಡುತ್ತವೆ ಎಂದರು.


ಇದಲ್ಲದೆ, ಎಲ್ಲಾ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ಭಾಗವತ್ ಪ್ರತಿಪಾದಿಸಿದ್ದಾರೆ.
ಮೋಹನ್ ಭಾಗವತ್ ಈ ಬಾರಿ ಕೂಡ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಕಪೋಲಕಲ್ಪಿತ ಹೇಳಿಕೆಯನ್ನು ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.