ನವದೆಹಲಿ: ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಜನ್ ಸೂರಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಶುಕ್ರವಾರ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನನ್ನು ಜಾರಿಗೆ ತರುವ ಮೊದಲು ಅದರಿಂದ ಪ್ರಭಾವಿತರಾಗುವ ಜನರ ವಿಶ್ವಾಸವನ್ನು ಸರ್ಕಾರ ಪಡೆದುಕೊಳ್ಳಬೇಕು ಎಂದರು.
“ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೇ ಅಥವಾ ಬೇಡವೇ ಎಂಬುದು ದೊಡ್ಡ ಚರ್ಚೆಯಾಗಿ ಉಳಿದಿದೆ. ದೇಶದ ಜನಸಂಖ್ಯೆಯ ಶೇ. 20 ರಷ್ಟಿರುವ ಮುಸ್ಲಿಂ ಜನಸಂಖ್ಯೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹೊರತು ಈ ರೀತಿಯ ಮೂಲಭೂತ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕಿಶೋರ್ ANI ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಿಎಎ-ಎನ್ಆರ್ಸಿ ವಿಷಯದಲ್ಲಿ ದೇಶದಾದ್ಯಂತ ಪ್ರತಿಭಟನೆಗಳನ್ನು ನೋಡಿದ್ದೇವೆ. ಕಾನೂನಿಂದ ತೊಂದರೆಗೊಳಗಾಗುವ ಜನರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳದ ಹೊರತು ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.