ಬೆಂಗಳೂರು: ನೃಪತುಂಗ ರಸ್ತೆಯ ಮಾರ್ಥಾಸ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡು ಇನ್ನೂ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮಾರ್ಥಾಸ್ ಆಸ್ಪತ್ರೆಯ ನವೀಕರಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಕೆಲಸಕ್ಕೆ ಮುಂಜಾನೆಯೇ ಬಂದಿದ್ದ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಕೆಲಸ ಮಾಡುತ್ತಿರುವಾಗ ಬೆಳಿಗ್ಗೆ 6ರ ವೇಳೆ ದಿಢೀರ್ ಮೇಲ್ಛಾವಣಿ ಕುಸಿದಿದ್ದು, ನಾಲ್ವರು ಕಾರ್ಮಿಕರು ಅದರಡಿ ಸಿಲುಕಿದ್ದು ಉಳಿದವರು ಹೊರ ಓಡಿ ಪಾರಾಗಿದ್ದಾರೆ.
ಕೂಡಲೇ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕದಳ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮೊದಲಿಗೆ ಇಬ್ಬರನ್ನು ರಕ್ಷಿಸಿದರು.
ಬಳಿಕ ಅವಶೇಷದಡಿ ಸಿಲುಕಿಕೊಂಡಿದ್ದ ಇನ್ನಿಬ್ಬರನ್ನು ಜೆಸಿಬಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ರಕ್ಷಿಸಲಾಗಿದ್ದು ಕೊನೆಯಲ್ಲಿ ರಕ್ಷಿಸಿದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಚಿಂತಾಜನಕವಾಗಿದೆ.
ರಾಯಚೂರು ಮೂಲದ ಕೂಲಿ ಕಾರ್ಮಿಕರಾದ ಮೊಯೀನುದ್ದಿನ್, ಚಾಂದ್ ಪಾಷಾ, ರಫೀಸಾಬ್ ರಕ್ಷಣೆ ಮಾಡಲಾಗಿದ್ದು ಈ ಮೂವರು ಸಣ್ಣಪುಟ್ಟ ಗಾಯಗೊಂಡು ಪಾರಾಗಿದ್ದಾರೆ.
ಕೊನೆಯಲ್ಲಿ ರಕ್ಷಿಸಿದ ಬಸವರಾಜ್ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ (ಪ್ರಭಾರ)ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಮೇಲ್ಛಾವಣಿ ಕುಸಿದು ಅದರಡಿ ಸಿಲುಕಿದ ಗಾಯಾಳು ಸೇರಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಕಾಮಗಾರಿಯ ದಾಖಲೆ ವಿವರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಯಚೂರು ಮೂಲದ ರಫೀಸಾಬ್ ನಗರಕ್ಕೆ ಉದ್ಯೋಗ ಅರಸಿ ಬಂದು ಎರಡು ವರ್ಷಗಳಿಂದ ಮಡಿವಾಳದಲ್ಲಿ ವಾಸವಿದ್ದರು. ಆತ ವಾಟರ್ ಪ್ರೂಪಿಂಗ್ ಕೆಲಸ ಮಾಡುತ್ತಿದ್ದರೆ, ರಫೀಸಾಬ್ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಸುಮಾರು ಅರವತ್ತು ಅಡಿ ಉದ್ದದ ಮೇಲ್ಛಾವಣಿ ಕುಸಿತವಾಗಿರುವುದರಿಂದ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲಾಗಿದ್ದು, ಆಸ್ಪತ್ರೆ ಮೇಲ್ಚಾವಣಿಯ ಸುಮಾರು ಅರವತ್ತು ಅಡಿ ದೂರಕ್ಕೆ ಫಿಲ್ಲರ್ ಗಳು ನಿರ್ಮಾಣವಾಗುತ್ತಿದ್ದು ಇದರಿಂದಾಗಿ ಕುಸಿದುಬಿದ್ದಿರುವ ಸಾಧ್ಯತೆಯಿದೆ.