ಬೆಂಗಳೂರು: ರಾಜ್ಯ ಸರ್ಕಾರದ ಅಪಘಾತ ಸಂತ್ರಸ್ತರ ಯೋಜನೆಯಡಿ ಇಲ್ಲಿಯವರೆಗೆ 550 ಜನ ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಆಕ್ಸಿಡೆಂಟ್ ಝೋನ್‌ನಲ್ಲಿ ಬರುವ ಖಾಸಗಿ ಆಸ್ಪತ್ರೆಯಲ್ಲಿ ಈ ಯೋಜನೆ ಅಡಿ ತುರ್ತು ಚಿಕಿತ್ಸೆ ಪಡೆಯಬಹುದಾಗಿದೆ. ಅಪಘಾತದ ಗೋಲ್ಡನ್ ಅವರ್‌ನಲ್ಲಿ ಮತ್ತು 48 ಗಂಟೆಗಳವರೆಗೆ ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ಅಪಘಾತ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಕಳೆದ ವರ್ಷ ಏಪ್ರಿಲ್ 8 ರಂದು ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ (MSHY) ಅನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ರಸ್ತೆ ಅಪಘಾತದ ಸಂತ್ರಸ್ತರಿಗೆ ತುರ್ತಾಗಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಎಪಿಎಲ್, ಬಿಪಿಎಲ್ ಎನ್ನದೇ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎಲ್ಲ ಸಂತ್ರಸ್ತರು ಈ ಯೋಜನೆಯಡಿ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ಈ ಯೋಜನೆ ಅಡಿ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡಿದರೆ 1 ಲಕ್ಷದವರೆಗೆ ಕ್ಲೈಮ್ ಮಾಡಬಹುದು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಪಘಾತ ವಲಯಗಳಲ್ಲಿನ ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ಸೇರಿಸಲಾಗುವುದು. ಇದರಿಂದ ಅಪಘಾತ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ದೊರೆಯುತ್ತದೆ. ಈ ಮೂಲಕ ಅಪಘಾತ ಸಂತ್ರಸ್ತ ಯೋಜನೆಯನ್ನು ಮತ್ತಷ್ಟು ಜನರು ಲಾಭ ಪಡೆಯುವರು. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಇಲ್ಲಿಯವರೆಗೆ 550 ಗಾಯಾಳುಗಳಿಗೆ ಚಿಕಿತ್ಸೆ ನೀಡಿದ 25 ಆಸ್ಪತ್ರೆಗಳಿಗೆ 91.5 ಲಕ್ಷ ರೂ. ಮರುಪಾವತಿ ಮಾಡಲಾಗಿದೆ ಚಿಕಿತ್ಸೆ ಪಡೆದ 550 ಪ್ರಕರಣಗಳಲ್ಲಿ ಸುಮಾರು 200 ಗಂಭೀರ ಪ್ರಕರಣವಾಗಿದ್ದವು. ಇವರಿಗೆ ಈ ಯೋಜನೆ ಅಡಿ ಗೋಲ್ಡನ್ ಅವರ್‌ನಲ್ಲಿ ತುರ್ತು ಚಿಕಿತ್ಸೆ ನೀಡುವ ಮೂಲಕ ಅವರ ಜೀವವನ್ನು ಉಳಿಸಲಾಯಿತು. ಸದ್ಯಕ್ಕೆ ರಾಜ್ಯದ 2955 ಸರ್ಕಾರಿ ಮತ್ತು 515 ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸೇರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಡಿ ಹೇಳಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಪಘಾತ ವಲಯಗಳನ್ನು ಪಟ್ಟಿ ಮಾಡಿ ಅದರ ವ್ಯಾಪ್ತಿಗೆ ಒಳಪಡುವ ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೂ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.