✍️ ಎಫ್.ನುಸೈಬಾ, ಕಲ್ಲಡ್ಕ
ದೇಶವು ಫ್ಯಾಸಿಸಂ ನ ಕರಾಳ ಹಸ್ತಗಳಲ್ಲಿ ನಲುಗಿ ಹೋಗುತ್ತಿದೆ ಎಂಬುದನ್ನು ಖಾತರಿ ಪಡಿಸಿದ ಮತ್ತೊಂದು ಅಮಾನವೀಯ ಘಟನೆಯು ದೇಶವನ್ನೇ ತಲ್ಲಣಿಸಿದೆ.ಸಂವೇದನಾಶೀಲ ಮನಸ್ಸುಗಳ ನಿದ್ದೆ ಗೆಡಿಸಿದೆ. ಉತ್ತರ ಪ್ರದೇಶದ ಮುಜಾಫರ್ ನಗರದ ಶಾಲೆಯೊಂದರಲ್ಲಿ 8 ವರ್ಷದ ಮುಸ್ಲಿಂ ಬಾಲಕನಿಗೆ ಶಿಕ್ಷಕಿಯೋರ್ವರು ಸಹ ವಿದ್ಯಾರ್ಥಿಗಳಿಂದ ಥಳಿಸಲು ಆದೇಶಿಸುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನಾಂಗ ದ್ವೇಷವನ್ನು ಪ್ರತಿಪಾದಿಸುವ ಫ್ಯಾಸಿಸಂನ ಕಬಂಧ ಬಾಹುಗಳು ಶಿಕ್ಷಣ ಕ್ಷೇತ್ರಕ್ಕೂ ವ್ಯಾಪಿಸಿಕೊಂಡಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.
ಫ್ಯಾಸಿಸ್ಟರಿಂದ ದೌರ್ಜನ್ಯಕ್ಕೀಡಾಗುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳ ಅಸಹಾಯಕತೆಯನ್ನು ದೇಶವು ಗಮನಿಸುತ್ತಿರುವುದು ಇದು ಮೊದಲ ಬಾರಿಯಲ್ಲ. ಘನತೆಯ ಬದುಕಿಗೆ ಕೊಡಲಿಯೇಟು ನೀಡುವ ಇಂತಹ ಪೈಶಾಚಿಕ ಕೃತ್ಯಗಳು ದಿನ ನಿತ್ಯ ಸಂಭವಿಸುತ್ತಿದ್ದರೂ, ಈ ಕ್ರೌರ್ಯಗಳು ಕೇವಲ ರಾಜಕೀಯ ಕೆಸರೆರಚಾಟದ ವಸ್ತುವಾಗಿ ಒಂದೆರಡು ದಿನಗಳಲ್ಲಿ ಮರೆಯಾಗಿ ಹೋಗುತ್ತದೆ ಎಂಬುವುದೇ ಖೇದಕರ. ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಂಡಿರುವ ಫ್ಯಾಸಿಸಂ ನ ಭಯಾನಕತೆಯನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ನಾಗರಿಕ ಸಮಾಜಕ್ಕೆ ಇನ್ನೂ ಸಾಧ್ಯವಾಗಿಲ್ಲ.
ದೇಶದ ಉಜ್ವಲ ಭವಿಷ್ಯಕ್ಕೆ ರುವಾರಿಗಳಾಗಬೇಕಾದ ಮಕ್ಕಳನ್ನು ಅಧರ್ಮದ ಕತ್ತಲಿನಿಂದ ಧರ್ಮದ ಬೆಳಕಿನೆಡೆಗೆ ಕರೆದೊಯ್ಯಬೇಕಾದ ಶಿಕ್ಷಣ ಸಂಸ್ಥೆಗಳು, ಕೈ ಹಿಡಿದು ಮುನ್ನಡೆಸಬೇಕಾದ ಶಿಕ್ಷಕರು ಪುಟ್ಟ ಹೃದಯಗಳಲ್ಲಿ ಜಾತೀಯತೆಯ ವಿಷ ಬೀಜ ಬಿತ್ತಿ ನಿರ್ಮಲ ಮನಸ್ಸುಗಳನ್ನು ಛಿದ್ರಗೊಳಿಸುವ ಮೂಲಕ ತಮ್ಮ ಸಂಘೀ ಅಜೆಂಡಾವನ್ನು ಕಾರ್ಯ ರೂಪಕ್ಕೆ ತರುವ ಶತ ಪ್ರಯತ್ನ ಇಲ್ಲಿ ಎದ್ದು ಕಾಣುತ್ತಿದೆ.
ಆರ್.ಎಸ್.ಎಸ್ ಸರಸಂಚಾಲಕ ಗೋಲ್ವಾಲ್ಕರ್ ಕಾಲದಿಂದ ಉಳುಮೆ ಮಾಡಿ ಇದೀಗ ಹೆಮ್ಮರವಾಗಿ ಬೆಳೆದು ನಿಂತಿರುವ ಫ್ಯಾಸಿಸಂ ನ ಕಹಿ ಫಸಲನ್ನು ದೇಶದಲ್ಲಿ ಉಣಬಡಿಸಲಾಗುತ್ತಿದೆ. ಈ ಫಸಲಿನ ಕಟಾವು ಕಾರ್ಯದ ನಿದರ್ಶನ ಎಂಬಂತಿದೆ ಕಲಬುರ್ಗಿ, ಗೋವಿಂದ ಪನ್ಸಾರೆ, ಗೌರಿ ಲಂಕೇಶ್ ಮುಂತಾದ ವಿಚಾರವಾದಿಗಳನ್ನು ಬಲಿ ಪಡೆದಿದ್ದು. ಅಖ್ಲಾಕ್, ರಿಯಾಝ್ ಮುಸ್ಲಿಯಾರ್, ಹಾಫಿಳ್ ಜುನೈದ್ ಮುಂತಾದ ಹತ್ತು ಹಲವು ಅಮಾಯಕರನ್ನು ಕೊಂದು ಹಾಕಿದ್ದು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಾಗಿಸಿದ್ದು. ಆದಿವಾಸಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು. ನೀರಿನ ಮಡಿಕೆ ಮುಟ್ಟಿದ ಕಾರಣಕ್ಕಾಗಿ ದಲಿತ ಬಾಲಕನನ್ನು ಥಳಿಸಿ ಕೊಂದಿದ್ದು. ಇದಾಗಿದೆ ಫ್ಯಾಸಿಸಂ.
ಮನುಸ್ಮೃತಿಯನ್ನೇ ಆರಾಧ್ಯ ಗ್ರಂಥವಾಗಿಸಿದ ಇವರಿಗೆ ಸಂವಿಧಾನವು ಕಾಲ ಕಸವಷ್ಟೆ. ಸರ್ವರಿಗೂ ಸಮಬಾಳು , ಸರ್ವರಿಗೂ ಸಮಪಾಲು ಎನ್ನುವ ಸಂವಿಧಾನ ಇವರಿಗೆ ಅಪಥ್ಯ. ಏಕತೆ ಎನ್ನುವುದು ಇವರಿಗೆ ಜೀರ್ಣಿಸಲಾಗದ ಸಾರ. ಒಂದು ರಾಷ್ಟ್ರ , ಒಂದು ಜನಾಂಗ , ಒಬ್ಬ ನಾಯಕ ಎಂಬ ಹಿಟ್ಲರ್ ನ ಸರ್ವಾಧಿಕಾರಿ ಸಿದ್ಧಾಂತವೇ ಇವರ ಆದರ್ಶ. ಈ ಆದರ್ಶವನ್ನು ಅನುಷ್ಠಾನಗೊಳಿಸುವಲ್ಲಿ ಸಂಘಪರಿವಾರದ ನಿಯಂತ್ರಣದಲ್ಲಿರುವ ಬಿಜೆಪಿ ಭಾಗಶಃ ಯಶಸ್ವಿಯೂ ಆಗಿದೆ.
“ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಏಕಾತ್ಮಕ ಸರ್ಕಾರದ ಪದ್ದತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆಯಬೇಕು” ಎಂಬ ಗೋಲ್ವಾಲ್ಕರ್ ಆದೇಶ, “ಅಲ್ಪಸಂಖ್ಯಾತರು ತಮ್ಮ ಅಸ್ತಿತ್ವದ ಅಸ್ಮಿತೆಯನ್ನು ಮರೆತು ರಾಷ್ಟ್ರೀಯ ಜನಾಂಗದಲ್ಲಿ ಬೆರೆತುಕೊಳ್ಳಬೇಕು ಅಥವಾ ರಾಷ್ಟ್ರೀಯ ಜನಾಂಗದ ಕೃಪಾಶ್ರಯದಲ್ಲಿ ಅದು ಅನುಮತಿಸುವಷ್ಟು ಕಾಲ ಇದ್ದು ಹೇಳಿದಾಕ್ಷಣ ತೊಲಗಿ ಹೋಗಬೇಕು ” ಎಂಬ ಗೋಲ್ವಾಲ್ಕರ್ ವಿಚಾರಗಳನ್ನು ಯಥಾವತ್ತಾಗಿ ಪಾಲಿಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.
ಲಕ್ಷಾಂತರ ಜನರ ಮಾರಣ ಹೋಮ ನಡೆಸಿ ಕುಖ್ಯಾತಿ ಗಳಿಸಿದ ಹಿಟ್ಲರ್ ನ ನಾಜಿ ಸಿದ್ಧಾಂತದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿರುವ ಗೋಲ್ವಾಲ್ಕರ್ “ಜರ್ಮನಿಯಲ್ಲಿ ಅತ್ಯುಚ್ಚ ಮಟ್ಟದ ಜನಾಂಗೀಯ ಅಭಿಮಾನ ತೋರಿ ಬಂದಿದೆ. ಹಿಂದುಸ್ಥಾನದಲ್ಲಿರುವ ನಾವು ಈ ಉತ್ತಮ ಪಾಠದಿಂದ ಕಲಿಯಬೇಕಾಗಿದೆ ಮತ್ತು ಲಾಭ ಪಡೆಯಬೇಕಾಗಿದೆ ” ಎಂದು ಹೇಳಿದ್ದರು. ಗೋಲ್ವಾಲ್ಕರ್ ಅವರ ಸಂತತಿಗಳು ನಡೆಸಿದ ಗುಜರಾತ್, ಮುಂಬೈ, ಭಾಗಲ್ಪುರ ಹತ್ಯಾಕಾಂಡಗಳು ಸೇರಿದಂತೆ ಹರಿಯಾಣ, ಮಣಿಪುರದಲ್ಲಿ ಈಗಲೂ ನಡೆಯುತ್ತಿರುವ ಕೋಮು ದಳ್ಳುರಿಗಳು ಹಿಟ್ಲರ್ ಅನುಸರಿಸಿದ ಜನಾಂಗೀಯ ದ್ವೇಷ ಸಿದ್ಧಾಂತವನ್ನೇ ಬಿಂಬಿಸುತ್ತಿದೆ. ಅಧಿಕಾರದ ದುರ್ಬಳಕೆಯಿಂದ ಬಿಜೆಪಿ ಸರ್ಕಾರ ತನ್ನ ಫ್ಯಾಸಿಸ್ಟ್ ನಿಲುವನ್ನು ಸುಲಭವಾಗಿ ಪಸರಿಸುತ್ತಿದೆಯಾದರೂ, ಸರ್ಕಾರದ ಬದಲಾವಣೆಯಿಂದ ದೇಶದ ಸ್ಥಿತಿಗತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ನಿರೀಕ್ಷಿಸಲಾಗದು.
ಖ್ಯಾತ ಲೇಖಕ ಶಿವಸುಂದರ್ ಅವರ ಮಾತಿನಂತೆ “ಆಡಳಿತದಲ್ಲಿರುವ ಬಿಜೆಪಿಗಿಂತ ವಿರೋಧ ಪಕ್ಷ ಬಿಜೆಪಿ ಹೆಚ್ಚು ಅಪಾಯಕಾರಿ. ವಿರೋಧ ಪಕ್ಷವಾಗಿಯೂ ಬಿಜೆಪಿ ಅಪ್ರಸ್ತುತವಾಗಬೇಕು “. ಇದಕ್ಕೆ ಪೂರಕವಾಗಿ ಕಂಡುಬರುತ್ತಿದೆ ಪ್ರಸಕ್ತ ಕರ್ನಾಟಕದ ಸ್ಥಿತಿಗತಿ. ಸರ್ಕಾರದ ಬದಲಾವಣೆಯಿಂದ ನೆಮ್ಮದಿಯ ದಿನಗಳನ್ನು ನಿರೀಕ್ಷಿಸಿದ್ದ ಅಲ್ಪಸಂಖ್ಯಾತ ಸಮುದಾಯಗಳು ಇನ್ನೂ ಕೂಡ ಅಭದ್ರತೆಯ ವಾತಾವರಣದಲ್ಲಿದೆ. ಹಿಂಸಾ ಪ್ರೇರಿತ ಹೇಳಿಕೆ ನೀಡುವವರು , ಕೊಲೆ ಕ್ರತ್ಯಗಳನ್ನು ಬಹಿರಂಗವಾಗಿ ಸಮರ್ಥಿಸುವರು ಕಂಬಿಗಳ ಹಿಂದೆ ಬಂಧಿಗಳಾಗದೆ ವಿಹರಿಸುತ್ತಿದ್ದಾರೆ. ಇತಿಹಾಸವನ್ನು ಗಮನಿಸಿದಾಗ ಬಾಬರಿಯ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಕೋಮುವಾದದ ಜೊತೆಯಲ್ಲಿ ಆಗ ಆಡಳಿತದಲ್ಲಿದ್ದ ಜಾತ್ಯಾತೀತ ಸರ್ಕಾರದ ಮೃಧು ಧೋರಣೆಯ ಪಾತ್ರ ಇರುವುದು ಜಗತ್ ಜಾಹೀರಾಗಿದೆ.
ಆದುದರಿಂದ ಇಲ್ಲಿ ಮೃಧು ಧೋರಣೆಯ ಪ್ರಭುತ್ವಕ್ಕಿಂತಲೂ ಮುಖ್ಯವಾಗಿ ಬದಲಾಗಬೇಕಿರುವುದು ಪ್ರಜೆಗಳ ಮನಸ್ಥಿತಿಯಾಗಿದೆ. ವಿವೇಚನಾರಹಿತ ಹೃದಯಗಳಲ್ಲಿ ಆಳವಾಗಿ ಬೇರೂರಿರುವ ಜಾತೀಯತೆಯ ಪೆಡಂಭೂತವನ್ನು ಬೇರು ಸಹಿತ ಕಿತ್ತೊಗೆಯಬೇಕು. ಫ್ಯಾಸಿಸಂ ನ ಅಪಾಯಕಾರಿ ಪರಿಣಾಮದ ವಾಸ್ತವತೆಯನ್ನು ಬಹಿರಂಗಗೊಳಿಸಬೇಕು. ಸಂಕುಚಿತ ಮನೋಭಾವದಿಂದ ಹೊರಬಂದು ವಿಶಾಲವಾದ ಚಿಂತನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಸೌಹಾರ್ದತೆ ಯ, ಭಾವೈಕ್ಯತೆಯ ಭಾರತವನ್ನು ಆಗ್ರಹಿಸುವ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಉಳಿವಿಗಾಗಿ ಭಿನ್ನತೆ ಮರೆತು ಸಂಘಟಿತರಾಗಬೇಕು. ಪ್ರತಿರೋಧ, ಪ್ರತಿಭಟನೆ ಎಂಬ ಅಸ್ತ್ರಗಳ ಮೂಲಕ ಫ್ಯಾಸಿಸಂ ತನ್ನ ಬಾಲ ಬಿಚ್ಚದಂತೆ ತಡೆಯೊಡ್ಡುಬೇಕು. ಇಲ್ಲವಾದಲ್ಲಿ ದೇಶವು ಮತ್ತೆ ಗುಲಾಮಗಿರಿಗೆ ತಳ್ಳಲ್ಪಡುವ ದಿನಗಳು ದೂರವಿಲ್ಲ.