ಗಾಝಾದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲು ಸಿದ್ಧವಾದ ವಿಶ್ವಸಂಸ್ಥೆ: ಕದನವಿರಾಮಕ್ಕೆ ಆಗ್ರಹ

Prasthutha|

ವಿಶ್ವಸಂಸ್ಥೆ: ಗಾಝಾದಲ್ಲಿ 10 ತಿಂಗಳ ವಯಸ್ಸಿನ ಮಗುವಿಗೆ ಪೋಲಿಯೊ ದೃಢವಾದ ಹಿನ್ನೆಲೆಯಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲು ಬೇಕಾಗಿ ಗಾಝಾದಲ್ಲಿ ಮಾನವೀಯ ಯುದ್ಧವಿರಾಮಕ್ಕಾಗಿ ವಿಶ್ವಸಂಸ್ಥೆ ಆಗ್ರಹಿಸಿದೆ.

- Advertisement -

ಗಾಝಾ ಪಟ್ಟಿಯಾದ್ಯಂತ ಆಗಸ್ಟ್ ಅಂತ್ಯದಲ್ಲಿ ಮತ್ತು ಸೆಪ್ಟಂಬರ್‌ನಲ್ಲಿ ಎರಡು ಸುತ್ತಿನ ಪೋಲಿಯೊ ಲಸಿಕಾ ಅಭಿಯಾನ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ ಸನ್ನದ್ಧವಾಗಿದೆ ಎಂದು ಅದು ಘೋಷಿಸಿದೆ. ಗಾಝಾದಲ್ಲಿ ನಾಲ್ಕು ವಾರಗಳ ಅಂತರದಲ್ಲಿ ಎರಡು ಸುತ್ತಿನ ಪೋಲಿಯೊ ಲಸಿಕೆಯನ್ನು ಅಳವಡಿಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಯುನಿಸೆಫ್ ಗಾಝಾದ ಆರೋಗ್ಯ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿ ಹೇಳಿದೆ.

ಇಸ್ರೇಲ್, ಹಮಾಸ್ ಹಾಗೂ ಗಾಝಾದಲ್ಲಿನ ಇತರ ಗುಂಪುಗಳು ಮಾನವೀಯ ವಿರಾಮಗಳ ಒಪ್ಪಂದಕ್ಕೆ ಸಮ್ಮತಿಸಬೇಕಾಗಿದೆ. ಈ ಬಗ್ಗೆ ಮಾತುಕತೆ ಮುಂದುವರಿದಿದೆ. ಲಸಿಕೆಗಳನ್ನು ತಂಪಾಗಿಸಲು ಹಲವಾರು `ರೆಫ್ರಿಜರೇಟರ್’ ವ್ಯವಸ್ಥೆಯುಳ್ಳ ಟ್ರಕ್‍ಗಳು ಗಾಝಾಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.

- Advertisement -

ಗಾಝಾದಲ್ಲಿ ದೀರ್-ಅಲ್ ಬಲಾಹ್‍ನಲ್ಲಿರುವ ಮಗುವಿಗೆ ಎಡಕಾಲಿನ ಕೆಳಭಾಗದಲ್ಲಿ ಪಾಶ್ರ್ವವಾಯು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅಲ್ಲಿ 25 ವರ್ಷದಲ್ಲಿ ಮೊದಲ ಪೋಲಿಯೊ ಪ್ರಕರಣವಾಗಿದೆ.



Join Whatsapp