ಉಳ್ಳಾಲ: ಮಾರುಕಟ್ಟೆ ಹರಾಜಿನಲ್ಲಿ ಅಕ್ರಮ, ಕೌನ್ಸಿಲರ್ ಗಳನ್ನು ಸಭೆಯಿಂದ ಹೊರದಬ್ಬಿದ ಪೊಲೀಸರು

Prasthutha|

ಉಳ್ಳಾಲ: ಉಳ್ಳಾಲ ನಗರಸಭೆಯ ನಗರೋತ್ಥಾನ -3 ರಡಿ ತೊಕ್ಕೊಟ್ಟು ಒಳಪೇಟೆಯಲ್ಲಿ ನವೀಕರಣಗೊಂಡ ವಾಣಿಜ್ಯ ಮಾರುಕಟ್ಟೆಯ ಸಾರ್ವಜನಿಕ ಬಹಿರಂಗ ಏಲಂ ಪ್ರಕ್ರಿಯೆಯೆಯಲ್ಲಿ ಅಕ್ರಮ ನಡೆದಿದೆ ಎಂದು ಗದ್ದಲ ನಡೆದು ಕೌನ್ಸಿಲರ್‌ಗಳನ್ನು ಪೊಲೀಸರು ಹೊರದಬ್ಬಿದ ಘಟನೆ ನಡೆದಿದೆ.

- Advertisement -

ನಗರಸಭೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ, ಎಸ್ಡಿಪಿಐ, ಜೆಡಿಎಸ್‌ ನಗರ ಸದಸ್ಯರು ಹರಾಜನ್ನು ತಡೆದಿದ್ದು, ವೀಕ್ಷಕರಾಗಿದ್ದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಸೂಚನೆಯಂತೆ ಪೊಲೀಸರು ನಗರ ಸದಸ್ಯರನ್ನು ಸಭೆಯಿಂದ ಹೊರದಬ್ಬಿದ್ದಾರೆ. ಕೌನ್ಸಿಲರ್‌ಗಳು ನಗರಸಭೆ ಪೌರಾಯುಕ್ತ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಶನಿವಾರ ಬೆಳಗ್ಗೆ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿ ನಗರ ಸದಸ್ಯೆ ಗೀತಾ ಭಾಯಿ, ನನ್ನ ಕ್ಷೇತ್ರ ವ್ಯಾಪ್ತಿಯ ಮಾರುಕಟ್ಟೆಯ ದಿಢೀ‌ರ್ ಹರಾಜು ಪ್ರಕ್ರಿಯೆ ಬಗ್ಗೆ ನಿನ್ನೆ ಸಂಜೆ ವಿಚಾರ ತಿಳಿದಿದೆ. ಈ ಹರಾಜಿನಲ್ಲಿ ಪಾರದರ್ಶಕತೆ ಇಲ್ಲ. ಹಣ ನೀಡಿದವರಿಗೆ 16 ಅಂಗಡಿಗಳನ್ನು ಮೀಸಲಿರಿಸಿದ್ದು ಹರಾಜನ್ನು ತಡೆಯುವಂತೆ ಸಹಾಯಕ ಆಯುಕ್ತರಲ್ಲಿ ಆಗ್ರಹಿಸಿದರು. ಸಭೆಯಲ್ಲಿದ್ದ ಜೆಡಿಎಸ್,ಎಸ್ಟಿಪಿಐ ನಗರ ಸದಸ್ಯರೂ ಹರಾಜನ್ನು ತಡೆಯುವಂತೆ ಒತ್ತಾಯಿಸಿದರು.

- Advertisement -

ಹರಾಜು ಪ್ರಕ್ರಿಯೆ ಮುಂದುವರಿದಾಗ ನಗರಸದಸ್ಯರು ನಗರಸಭೆಗೆ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಸಹಾಯಕ ಆಯುಕ್ತರು ಧಿಕ್ಕಾರ ಕೂಗಿದ ಕೌನ್ಸಿಲರ್ಗಳನ್ನ ಪೊಲೀಸ್ ಬಲ ಪ್ರಯೋಗಿಸಿ ಸಭೆಯಿಂದ ಹೊರದಬ್ಬಿದ್ದಾರೆ.

2023 ರ ಜನವರಿ 10 ರಂದು ಮಾರುಕಟ್ಟೆಯನ್ನು ಹರಾಜು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಹರಾಜಲ್ಲಿ ಭಾಗವಹಿಸಲು ಅನೇಕ ಮಂದಿ ತಲಾ 500 ರೂ. ಕಟ್ಟಿದ್ದರು. ಅಂದಿನ ಹರಾಜು ತಡೆದದ್ದು ಏಕೆ?ಜನರು ಕಟ್ಟಿದ ಹಣ ಎಲ್ಲಿ ಹೋಯಿತು, ಈಗ ದಿಢೀರನೆ ಹರಾಜು ನಡೆಸಿದ ಉದ್ದೇಶ ಏನು? ಚುನಾಯಿತ ಪ್ರತಿನಿಧಿಗಳನ್ನು ಹೊರಹಾಕಿ ಹರಾಜು ನಡೆಸಿದ ಅಧಿಕಾರಿಯನ್ನು ನಾವು ಸುಮ್ಮೆ ಬಿಡಲ್ಲ ಎಂದು ನಗರ ಸದಸ್ಯ ರಮೀಝ್ ಆಕ್ರೋಶ ಹೊರಹಾಕಿದರು.

ನಗರ ಸದಸ್ಯೆ ಖಮರುನ್ನೀಸಾ ಮಾತನಾಡಿ, ಇದು ಅಧಿಕಾರಿಗಳ ಲಾಭಕ್ಕೋಸ್ಕರ ಮಾಡಿದ ಹರಾಜು. ಇಲ್ಲಿನ ಪೌರಾಯುಕ್ತ ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಕೌನ್ಸಿಲರ್ಗಳನ್ನ ವಿಶ್ವಾಸಕ್ಕೆ ತೆಗೆಯದೆ ಯಾವುದೇ ಸಭೆ ಮಾಡದೆ ನಿನ್ನೆ ಸಂಜೆ ಏಕಾಏಕಿ ಹರಾಜಿನ ಸಂದೇಶ ವಾಟ್ಸಪ್ಪಲ್ಲಿ ಕಳುಹಿಸಿದ್ದಾರೆ ಎಂದರು.

ನಗರಸದಸ್ಯರ ವಿರೋಧ, ಪ್ರತಿಭಟನೆಯ ನಡುವಲ್ಲೂ ಹರಾಜು ಪ್ರಕ್ರಿಯೆ ನಡೆದಿದೆ.

ನಗರಸಭೆಯ ಮಾಜಿ ಉಪಾಧ್ಯಕ್ಷರೊಬ್ಬರು ಲಕ್ಷಾಂತರ ರೂಪಾಯಿಗಳನ್ನು ಪಡೆದು ಮಾರುಕಟ್ಟೆಯ ಮಳಿಗೆಗಳನ್ನ ಇಷ್ಟ ಮಿತ್ರರಿಗೆ ಮಾರಿರುವ ಆರೋಪಗಳಿವೆ.

Join Whatsapp