ಉಳ್ಳಾಲ ಉರೂಸ್ ಸರ್ವರ ಸಹಕಾರದಿಂದ ಯಶಸ್ವಿಯಾಗಿದೆ: ಹಾಜಿ ಅಬ್ದುಲ್ ರಶೀದ್

Prasthutha|

ಮಂಗಳೂರು: ಉಳ್ಳಾಲ ಸಯ್ಯದ್ ಮದನಿ ದರ್ಗಾದ 429 ನೇ ಉರೂಸ್ ಸಮಾರಂಭವು ಸರ್ವರ ಸಹಕಾರದಿಂದ ಯಶಸ್ವಿಯಾಗಿದೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದರು.

- Advertisement -

ದರ್ಗಾ ಕಮಿಟಿ ವತಿಯಿಂದ ದರ್ಗಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಶೀದ್ ಹಾಜಿ, ಕೋವಿಡ್ ಸಂದಿಗ್ಧತೆಯ ನಡುವೆಯೂ ಉರೂಸ್ ಸುಸೂತ್ರವಾಗಿ ನಡೆದಿದೆ. ಜಿಲ್ಲಾಡಳಿತ ಆರಂಭದಲ್ಲಿ ಅನುಮತಿ ನೀಡದಿದ್ದರೂ ಬಳಿಕ ಉರೂಸ್ ಸಮಾರಂಭಕ್ಕೆ ಮುಕ್ತ ಅವಕಾಶ ಕಲ್ಪಿಸಿತ್ತು. ಜಿಲ್ಲಾಧಿಕಾರಿಗಳು ಉರೂಸ್ ಸಮಾರಂಭಕ್ಕೆ ಬೇಕಾಗಿ ಹಲವು ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆರೋಗ್ಯ, ರಕ್ಷಣೆ, ನಗರಸಭೆ, ಮೆಸ್ಕಾಂ ಹಾಗೂ ಶಾಸಕ ಯುಟಿ ಖಾದರ್ ಸೇರಿದಂತೆ ಸರ್ವರ ಸಹಕಾರದಿಂದ ಉಳ್ಳಾಲ ಉರೂಸ್ ಯಶಸ್ವಿಯಾಗಿದೆ. ಸ್ಥಳೀಯ ಕ್ರೈಸ್ತರು, ದೇವಾಲಯಗಳ ಮುಖಂಡರು ಕೂಡಾ ಒಳ್ಳೆಯ ಸಹಕಾರ ನೀಡಿದ್ದಾರೆ. ಸ್ಥಳೀಯ ಕೊರಗಜ್ಜ ಕಟ್ಟೆಯ ಕಾರ್ಯಕ್ರಮವೊಂದನ್ನು ಉರೂಸ್ ಕಾರಣಕ್ಕಾಗಿ ತಿಂಗಳ ಮಟ್ಟಿಗೆ ಮುಂದೂಡಿದ್ದು ಉಳ್ಳಾಲದ ಇತಿಹಾಸದಲ್ಲಿಯೇ ಉಲ್ಲೇಖನೀಯ ವಿಚಾರ.

ಉಳ್ಳಾಲ ಹೊರಗೆ ಕೂತವರಿಗಷ್ಟೇ ಕೋಮು ಸೂಕ್ಷ್ಮ ಪ್ರದೇಶವಾಗಿದೆ ಹೊರತು ಉಳ್ಳಾಲದಲ್ಲಿ ನೆಲೆಸಿರುವ ನಾಗರಿಕರಿಗಲ್ಲ ಎಂದು ರಶೀದ್ ಹಾಜಿ ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಉಳ್ಳಾಲ ವ್ಯಾಪ್ತಿಯ ಸರ್ವ ಧರ್ಮೀಯರಿಗೆ ನೆರವಾಗುವಂತೆ ಆರೋಗ್ಯ ನಿಧಿ ಹಾಗೂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡಬಹುದಾದಂತಹ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯಿಲ್, ಬಾವಾ ಮಹಮ್ಮದ್, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಪ್ರಧಾನ‌ ಕಾರ್ಯದರ್ಶಿ ಮಹಮ್ಮದ್ ತ್ವಾಹ ಹಾಜಿ, ಯು.ಕೆ ಇಲ್ಯಾಸ್ ಉಳ್ಳಾಲ್, ಯು.ಟಿ ಇಲ್ಯಾಸ್, ಆಝಾದ್ ಇಸ್ಮಾಯಿಲ್, ನೌಷಾದ್ ಉಳ್ಳಾಲ್, ಕೆ.ಎಂ ಮಹಮ್ಮದ್, ಹಮ್ಮಬ್ಬ, ಹನೀಫ್ ಚೆಂಬುಗುಡ್ಡೆ, ಆಸೀಫ್ ಅಬ್ದುಲ್ಲಾ, ಹಮೀದ್ ಕೋಡಿ ಉಪಸ್ಥಿತರಿದ್ದರು.



Join Whatsapp