ಉಳ್ಳಾಲ : ಇತ್ತಿಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ಕೆ ಸಿ ರೋಡ್ ನಲ್ಲಿ ಪಬ್ಜಿ ಆಟದಲ್ಲಿ ನಿರಂತರವಾಗಿ ಸೋಲುತ್ತಿದ್ದ ಯುವಕನೋರ್ವ ತನ್ನ ಎದುರಾಳಿ ಬಾಲಕ ಆಕಿಫ್ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಿದ್ದ. ಪೊಲೀಸರು ಮರುದಿನವೇ ಆರೋಪಿ ದೀಪಕ್ ನನ್ನು ಬಂಧಿಸಿದ್ದರು. ಇದೀಗ ಪೊಲೀಸರು ಆರೋಪಿಗೆ ಆಶ್ರಯ ನೀಡಿದ ಆರೋಪದಲ್ಲಿ ಆತನ ತಂದೆ ಸಂತೋಷ್ (45) ಎಂಬವನನ್ನು ಸೋಮವಾರ ಬಂಧಿಸಿದ್ದಾರೆ.
ಆಕಿಫ್ ನನ್ನು ಕೊಂದ ಆರೋಪಿ ದೀಪಕ್ ಮನೆಗೆ ಬಂದು ತಂದೆಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಆದರೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡದೆ ಇದ್ದುದಕ್ಕಾಗಿ ಮತ್ತು ಆರೋಪಿಯನ್ನು ಪೊಲೀಸರ ವಶಕ್ಕೆ ನೀಡದ ಕಾರಣಕ್ಕಾಗಿ ಇದೀಗ ತಂದೆಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಸಾರ್ವಜನಿಕರಲ್ಲಿ ಬೆಳೆಯುತ್ತಿರುವ ಸಂಶಯದ ಹುತ್ತ ?
ಕೊಲೆ ನಡೆದು ಮೂರು ದಿನಗಳಾದರೂ ಸಾರ್ವಜನಿಕರು ಮಾತ್ರ ಇದನ್ನು ಪಬ್ಜಿ ಆಟಕ್ಕಾಗಿ ನಡೆದ ಕೊಲೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಮಾತ್ರವಲ್ಲ ಈ ಕೊಲೆ ಕೇವಲ ದೀಪಕ್ ಓರ್ವನಿಂದ ನಡೆದದ್ದಲ್ಲ ಎಂದು ಕೆಲ ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಾರೆ. ಚೀನಾ ನಿರ್ಮಿತ ಆಪ್ ಎಂದು ಕೇಂದ್ರ ಸರ್ಕಾರ ಪಬ್ಜಿಯನ್ನು ನಿಷೇಧಿಸಿ ಎಂಟು ತಿಂಗಳು ಕಳೆದಿದೆ. ನಿಷೇಧವಾದ ಆಪ್ ಒಂದರಲ್ಲಿ ಆಕಿಫ್ ಮತ್ತು ದೀಪಕ್ ಇನ್ನೂ ಆಟ ಆಡಲು ಹೇಗೆ ಸಾಧ್ಯ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೊಲೆ ನಡೆದ ಮರುದಿನ ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಲ್ಲಿ ಸಾರ್ವಜನಿಕರು ಇದೇ ಪ್ರಶ್ನೆ ಕೇಳಿದಾಗಲೂ ಅವರಿಂದ ಸಮರ್ಪಕ ಉತ್ತರ ದೊರಕಿರಲಿಲ್ಲ. ಇದೀಗ ಆರೋಪಿಯ ತಂದೆಯ ಬಂಧನ ಕೂಡಾ ಪಬ್ಜಿ ಆಟದ ನೆಪದಲ್ಲೇ ಈ ಕೊಲೆ ನಡೆದಿದೆ ಎನ್ನುವುದನ್ನು ಖಾತ್ರಿ ಮಾಡಲು ಆಗಿದೆ ಎಂದು ಸ್ಥಳೀಯ ಕೆಲವರು ಆರೋಪಿಸುತ್ತಾರೆ. ಯಾವುದಕ್ಕೂ ಪೊಲೀಸರ ಸಮರ್ಪಕ ತನಿಖೆ ಮಾತ್ರ ಘಟನೆಯ ವಾಸ್ತವ ಸಂಗತಿಗಳನ್ನು ಬಹಿರಂಗಪಡಿಸಬಹುದಾಗಿದೆ.