ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಆದರೆ ಪಕ್ಷದ ವರಿಷ್ಠರ ಗಮನಕ್ಕೆ ತಾರದೆ ನಾಮಪತ್ರ ಹಿಂಪಡೆದ ಬಳಿಕ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಸುನ್ನಿ ಸಂಘಟನೆಯಲ್ಲಿ ಗುರುತಿಸಿ ಕೊಂಡಿದ್ದ ಅಲ್ತಾಫ್ ಕುಂಪಲ ಸಾರ್ವಜನಿಕ ವಲಯದಲ್ಲಿ ಉತ್ತಮ ಸಮಾಜ ಸೇವಕರಾಗಿ ಹೆಸರು ಪಡೆದಿದ್ದಾರೆ. ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಾರಣ ಅವರನ್ನು ಸಂಘಟನೆಯಿಂದ ವಜಾ ಮಾಡಲಾಗಿತ್ತು.
ಅಲ್ತಾಫ್ ಕುಂಪಲ ಹಲವು ವರ್ಷಗಳಿಂದ ಎಸ್ ವೈ ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡಿದ್ದರು. ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್ ಮನವೊಲಿಸಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಮಂಗಳೂರು ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರು ಸೇರಿದಂತೆ ಭರ್ಜರಿ ಮೆರವಣಿಗೆ ನಡೆಸಿ ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಈಗ ಅಲ್ತಾಫ್ ತನ್ನ ಪಕ್ಷದ ಮುಖಂಡರುಗಳಿಗೆ ಮಾಹಿತಿಯನ್ನೇ ಕೊಡದೇ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಜೆಡಿಎಸ್ ಆರೋಪಿಸಿದೆ.
ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೆಸ್’ನಿಂದ ಯು.ಟಿ.ಖಾದರ್, ಎಸ್’ಡಿಪಿಐನಿಂದ ರಿಯಾಝ್ ಫರಂಗಿಪೇಟೆ, ಬಿಜೆಪಿಯಿಂದ ಸತೀಶ್ ಕುಂಪಲ ಕಣದಲ್ಲಿದ್ದಾರೆ.