ಉಳ್ಳಾಲ ನಗರ ಸಭೆ: ಬಜೆಟ್ ಮಂಡನೆಗೆ ಕರೆದಿದ್ದ ಕೌನ್ಸಿಲ್ ಸಭೆಯಲ್ಲಿ ಗದ್ದಲ, ಕೋಲಾಹಲ

Prasthutha|

►ಬಜೆಟ್’ನಲ್ಲಿ ಕೌನ್ಸಿಲರ್ ಫಂಡ್’ಗೆ ಅನುದಾನ ನೀಡದ್ದಕ್ಕೆ SDPI, ಜೆಡಿಎಸ್ ಸದಸ್ಯರಿಂದ ತೀವ್ರ ಆಕ್ಷೇಪ

- Advertisement -

►ಕಿವಿಗೆ ಹೂವಿಟ್ಟು ಸಭೆಗೆ ಬಂದ ಜೆಡಿಎಸ್ ಸದಸ್ಯರು

►ನಗರ ಸಭೆ ದುರಾಡಳಿತದ ವಿರುದ್ಧ ಫೆ.28ರಂದು ಬೃಹತ್ ಪ್ರತಿಭಟನೆ

- Advertisement -

ಮಂಗಳೂರು: ಉಳ್ಳಾಲ ನಗರ ಸಭೆಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಕರೆದಿದ್ದ ಕೌನ್ಸಿಲ್ ಸಭೆ ಭಾರೀ ಕೋಲಾಹಲ, ಗದ್ದಲಕ್ಕೆ ಕಾರಣವಾದ ಪ್ರಸಂಗ ಮಂಗಳವಾರ ನಡೆದಿದೆ.

ಬಜೆಟ್ ಮಂಡನೆಯ ಬಳಿಕ ಎಸ್’ಡಿಪಿಐ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಜೆಟ್’ನಲ್ಲಿ ಕೌನ್ಸಿಲರ್ ಫಂಡ್’ಗೆ ಒಂದು ರೂಪಾಯಿ ಅನುದಾನವನ್ನು ಕೂಡ ಮೀಸಲಿಟ್ಟಿಲ್ಲ. ನಗರದ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಕಾಮಗಾರಿ ಕೈಗೊಳ್ಳಲು ಬಜೆಟ್’ನಲ್ಲಿ ಯಾವುದೇ ಒತ್ತು ನೀಡಿಲ್ಲ. ಇದು ಜನವಿರೋಧಿ ಬಜೆಟ್ ಆಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್’ನ ಭ್ರಷ್ಟಾಚಾರದಿಂದ ನಗರ ಸಭೆಯ ಬೊಕ್ಕಸ ಬರಿದಾಗಿದೆ ಎಂದು ಎಸ್’ಡಿಪಿಐ ಕೌನ್ಸಿಲರ್ ರಮೀಝ್ ಜೋರು ಧ್ವನಿಯಲ್ಲಿ ಟೀಕಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಮತ್ತು ಎಸ್’ಡಿಪಿಐ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಕೌನ್ಸಿಲರ್’ಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ತಟಸ್ಥ ಎಂದು ಹೇಳಿಕೊಂಡ ಬಿಜೆಪಿಯೊಂದಿಗೆ ಕಾಂಗ್ರೆಸ್ ಸದಸ್ಯರು ಒಳಒಪ್ಪಂದ ಮಾಡಿಕೊಂಡಿದ್ದಾರೆ. ಇಲ್ಲದಿದ್ದರೆ ಬಿಜೆಪಿಯ ನಿಲುವನ್ನು ಉಪಾಧ್ಯಕ್ಷರು ಮೇಜು ಕುಟ್ಟಿ ಸ್ವಾಗತಿಸುವ ಔಚಿತ್ಯವಾದರೂ ಏನು? ಎಂದು ಎಸ್’ಡಿಪಿಐ ಸದಸ್ಯ ಅಸ್ಗರ್ ಅಲಿ ಕುಟುಕಿದರು.

ಈ ಮಧ್ಯೆ ಬಜೆಟ್’ನಲ್ಲಿ ನಗರದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಉಳ್ಳಾಲ ಜನತೆಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಕಿವಿಗೆ ಹೂವಿಟ್ಟು ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಅಣಕಿಸಿದರು.

ಬಜೆಟ್ ಮಂಡನೆ ವೇಳೆ ಜೆಡಿಎಸ್ ನ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್ , ಖಲೀಲ್, ಜಬ್ಬಾರ್, ಮುಷ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್’ ಜನವಿರೋಧಿಯಾಗಿದೆ ಎಂದು ಘೋಷಣೆ ಕೂಗಿದರು.

ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಅವರು, ‘ಕಾಂಗ್ರೆಸ್  ಬಜೆಟ್‌’ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್‌’ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ’ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯ್ಯೂಬ್ ಮಂಚಿಲ ಟೇಬಲ್ ಕುಟ್ಟಿ ಬೆಂಬಲ ಸೂಚಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನ ದಿನಕರ್ ಉಳ್ಳಾಲ್, ‘ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿವೆ. ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಆಕ್ಷೇಪಿಸಿದರು.

ಈ ವೇಳೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಹೆಚ್ಚಾಯಿತು. ತಕ್ಷಣ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಅವರು ರಾಷ್ಟ್ರಗೀತೆ ಹಾಡಲು ಸೂಚಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.

ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಕ್ಕೆ‌ ಆಕ್ಷೇಪಿಸಿದ ಎಸ್‌’ಡಿಪಿಐ ಸದಸ್ಯ ಅಸ್ಗರ್ ಆಲಿ, ‘ಸಭೆ ಸಂಪೂರ್ಣಗೊಂಡಿಲ್ಲ. ಬಜೆಟ್’ಗೆ ನಮ್ಮ ವಿರೋಧವಿದೆ ಎಂದು ಕಡತದಲ್ಲಿ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್’ನ ಭಾರತಿ ಮತ್ತು ವೀಣಾ ಶಾಂತಿ ಡಿ‌ಸೋಜ ಅವರು ಎಸ್’ಡಿಪಿಐ ಸದಸ್ಯ ಅಸ್ಗರ್ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದು ಎಸ್’ಡಿಪಿಐ ಸದಸ್ಯರನ್ನು ಕೆರಳಿಸಿತು.‌ ಆಗ ಎಸ್’ಡಿಪಿಐ ಸದಸ್ಯರು, ಕಾಂಗ್ರೆಸ್ ಸದಸ್ಯರ ವಿರುದ್ಧ ಹರಿಹಾಯ್ದರು. ಈ ವೇಳೆ  ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆಯಿತು.

ಸಭೆಯ ಬಳಿಕ ಎಸ್.ಡಿಪಿಐ ಕೌನ್ಸಿಲರ್’ಗಳಾದ ರಮೀಝ್, ಅಸ್ಗರ್ ಅಲಿ, ಕಮರುನ್ನಿಸಾ, ಝರೀನಾ ರವೂಫ್, ರುಖಿಯಾ ಇಕ್ಬಾಲ್, ಶಹನಾಝ್ ಅಕ್ರಮ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಳ್ಳಾಲ ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಜನರಿಗೆ ಪೂರಕವಾಗುವ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ವಾರ್ಡ್’ನ ಸಮಸ್ಯೆ ಹೇಳಿದರೆ ಉತ್ತರ ಸಿಗುವುದಿಲ್ಲ. ನಗರ ಸಭೆ ಆಯುಕ್ತರು ಕಾನೂನು ಪ್ರಕಾರ ನಡೆದುಕೊಳ್ಳುವುದನ್ನು ಬಿಟ್ಟು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಗರಸಭೆಯ ಬೊಕ್ಕಸ ದಿವಾಳಿಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ. ವಾರ್ಡ್’ನ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರ ನೀಡುವ ಸೌಜನ್ಯ ತೋರಿಸುತ್ತಿಲ್ಲ. ಕೌನ್ಸಿಲರ್’ಗಳಿಗೆ ಯಾವುದೇ ಗೌರವವಿಲ್ಲ ಎಂದು ಎಸ್’ಡಿಪಿಐ ಕೌನ್ಸಿಲರ್’ಗಳು ಆರೋಪಿಸಿದರು.

ನಗರಸಭೆಯ ದುರಾಡಳಿತ ಮತ್ತು ಆಡಳಿತ ಪಕ್ಷದ ಉದ್ಧಟತನವನ್ನು ವಿರೋಧಿಸಿ ಫೆ.28ರಂದು ನಗರಸಭೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ಪ್ರಕಟಿಸಿದರು.

Join Whatsapp